ಗೋಣಿಕೊಪ್ಪಲು, ಸೆ. ೧೫: ರಾಜ್ಯದಲ್ಲಿ ‘೨ಎ’ಯಡಿಯಲ್ಲಿ ಸುಮಾರು ೧೦೨ ಜಾತಿ ಜನಾಂಗಗಳಿಗೆ ಶೇ.೧೫ರಷ್ಟು ಮೀಸಲಾತಿ ಈವರೆಗೂ ಜಾರಿಯಲ್ಲಿದ್ದು ಇದೀಗ ರಾಜ್ಯದಲ್ಲಿ ಆರ್ಥಿಕವಾಗಿ, ಸಾಮಾಜಿಕ ವಾಗಿ,ರಾಜಕೀಯವಾಗಿ ಪ್ರಬಲ ರಾಗಿರುವ ಪಂಚಮಶಾಲಿಗಳು ‘೨ಎ ಮೀಸಲಾತಿ ಕೊಡಿ’ ಎಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದು, ಒಂದೊಮ್ಮೆ ರಾಜ್ಯ ಸರ್ಕಾರ ಪಂಚಮಶಾಲಿ ಜನಾಂಗಕ್ಕೆ ೨ಎ ಮೀಸಲಾತಿ ನೀಡಿದ್ದೇ ಆದಲ್ಲಿ ೧೦೨ ಶೋಷಿತ ಸಮಾಜಗಳಿಗೆ ತೀವ್ರ ಅನ್ಯಾಯವಾಗಲಿದೆ ಎಂದು ಗೋಣಿಕೊಪ್ಪಲಿನಲ್ಲಿ ಕೊಡಗು ಕಾಯಕ ಸಮಾಜಗಳ ಒಕ್ಕೂಟದ ಉಸ್ತುವಾರಿ ವಹಿಸಿರುವ ಟಿ.ಎಲ್. ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.
ಇದೀಗ ಸುಮಾರು ೨೧ ಸಮುದಾಯವನ್ನೊಳಗೊಂಡ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ರಾಜ್ಯಾಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಪುಟ್ಟಸಿದ್ಧಶೆಟ್ಟಿ ಅವರು, ಪಂಚಮಶಾಲಿಗಳಿಗೆ ೨ಎ ನೀಡುವದರ ವಿರುದ್ಧ ಬೆಂಗಳೂರಿನಲ್ಲಿ ತಾ.೨೦ ರಂದು ಅಲ್ಲಿನ ಮೆಜೆಸ್ಟಿಕ್ ಸಮೀಪ ಮೌರ್ಯ ವೃತ್ತದ ಮುಂಭಾಗ ಗಾಂಧಿ ಪ್ರತಿಮೆ ಬಳಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಎಲ್ಲೆಡೆಯಿಂದ ೨ಎ ಗೆ ಒಳಪಡುವ ಶೋಷಿತ ಸಮಾಜ ಬಾಂಧವರು ಧರಣಿಯಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.
ಕಾಯಕ ಸಮಾಜಗಳ ಒಕ್ಕೂಟದ ಮೂಲಕ ಈಗಾಗಲೇ ೧) ವಿಶ್ವಕರ್ಮ ೨) ಕುಂಬಾರ ೩) ಮಡಿವಾಳ ೪) ನಯನ ಜಾಕ್ಷತ್ರೀಯ ೫) ಕೊರಮ ೬) ಕೊರಚ ೭) ಬೋವಿ ೮) ಗಾಣಿಗ ೯) ಉಪ್ಪಾರ ೧೦) ದೇವಾಂಗ ೧೧)ಬಲಿಜಿಗ ೧೨) ಈಡಿಗ ೧೩) ಮೇಧಾ ೧೪) ಹೂವಾಡಿಗ ೧೫) ಗೆಜ್ಜೆಗಾರ ೧೬) ದೊಂಬಿದಾಸ ೧೭) ಗೊಲ್ಲಾ ೧೮) ಹಕ್ಕಿ ಫಿಕ್ಕೆ ೧೯) ಗೊಂದಾಳಿ ೨೦) ಬುಡಕಟ್ಟು ಸಮಾಜ ಹಾಗೂ ೨೧) ರಾಯ ರವತ್ ಇತರೆ ಸಣ್ಣಪುಟ್ಟ ಸಮಾಜಗಳನ್ನು ಸೇರಿಸಿ ಕಾಯಕ ಸಮಾಜ ಒಕ್ಕೂಟ ರಚಿಸಲಾಗಿದ್ದು, ಮುಂದೆ ಕೊಡಗು ಜಿಲ್ಲಾ ಸಮಿತಿ ರಚನೆ ಮಾಡಲಾಗುವದು ಎಂದು ಶ್ರೀನಿವಾಸ್ ತಿಳಿಸಿದ್ದಾರೆ