ಸೋಮವಾರಪೇಟೆ, ಸೆ. ೧೫: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ‘ಶಕ್ತಿ’ಗೆ ಮೂರು ಪ್ರಶಸ್ತಿ ಲಭಿಸಿದೆ.

ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ಅವರು ತಮ್ಮ ತಂದೆ-ತಾಯಿ ತೇಲಪಂಡ ಶಾರದಾ ಮತ್ತು ಸೋಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ಮೌಲ್ಯವುಳ್ಳ ವರದಿ ಪ್ರಶಸ್ತಿಗೆ, ಸೋಮವಾರಪೇಟೆಯ ‘ಶಕ್ತಿ’ ವರದಿಗಾರ ವಿಜಯ್ ಹಾನಗಲ್ ಬರೆದಿರುವ ‘ಕೊರೊನಾ ಸೋಂಕಿತರ ಅಂತ್ಯಕ್ರಿಯೆ ಮಾಡಿದ್ದಕ್ಕೆ ಅಂಗಡಿ ಖಾಲಿ ಮಾಡಿಸಿದ ಮಾಲೀಕ’ ವರದಿ ಆಯ್ಕೆಯಾಗಿದೆ.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ತಮ್ಮ ತಂದೆ-ತಾಯಿ ಬಿ.ಕೆ. ಸುಬ್ಬಯ್ಯ - ಜಯಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ-ಪರಿಸರ ಮತ್ತು ವನ್ಯಜೀವಿ ವಿಭಾಗದ ಪ್ರಶಸ್ತಿಯು ‘ಶಕ್ತಿ’ಯ ಕಣಿವೆ ವರದಿಗಾರ ಕೆ.ಎಸ್. ಮೂರ್ತಿ ಬರೆದಿರುವ ‘ಅಲ್ಲಿ ಅರಣ್ಯದೊಳಗೆ ಆಹಾರವಿಲ್ಲ.., ಇಲ್ಲಿ ರೈತರ ಬೆಳೆ ಉಳಿಯುತ್ತಿಲ್ಲ’ ವರದಿಗೆ ಲಭಿಸಿದೆ.

ಕುಶಾಲನಗರದ ಪತ್ರಕರ್ತ ಎಂ.ಎನ್. ಚಂದ್ರಮೋಹನ್ ತಮ್ಮ ತಂದೆ ತಾಯಿ ಎಂ.ನಾರಾಯಣ ಮತ್ತು ಎಂ.ಪದ್ಮಾವತಿ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿಗೆ ‘ಶಕ್ತಿ’ಯ ಕೂಡಿಗೆ ವರದಿಗಾರ ಕೆ.ಕೆ. ನಾಗರಾಜ ಶೆಟ್ಟಿ ಬರೆದಿರುವ ‘ನಿವೇಶನ ರಹಿತರಿಂದ ಬೆಟ್ಟದ ಮೇಲೆ ಮನೆ ನಿರ್ಮಾಣ’ ವರದಿ ಆಯ್ಕೆಯಾಗಿದೆ.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ ಕುಮಾರ್ ತಮ್ಮ ತಂದೆ ಹೆಚ್.ಎಸ್. ರಾಮೇಗೌಡ ಹೆಸರಿನಲ್ಲಿ ಸ್ಥಾಪಿಸಿದ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿಯು ಸೋಮವಾರಪೇಟೆಯ ವಿಜಯಕರ್ನಾಟಕ ವರದಿಗಾರ ತೇಲಪಂಡ ಕವನ್ ಕಾರ್ಯಪ್ಪ ಅವರು ಬರೆದಿರುವ ಜಂಬೂರು ಪುನರ್ವಸತಿ ಬಡಾವಣೆಯ ‘ಹೊರಗೆ ಥಳಕು ಒಳಗೆ ಹುಳುಕು’ ವರದಿಗೆ ಲಭಿಸಿದೆ. ಪತ್ರಕರ್ತರ ಸಂಘದ ರಾಷ್ಟಿçÃಯ ಮಂಡಳಿ ಸದಸ್ಯ ಎಸ್.ಎ. ಮುರಳೀಧರ್ ತಮ್ಮ ತಂದೆ ಟಿ.ಪಿ. ಅಪ್ಪಸ್ವಾಮಿ ಹೆಸರಿನಲ್ಲಿ ಪ್ರಾರಂಭಿಸಿರುವ ಅತ್ಯುತ್ತಮ ಕ್ರೀಡಾವರದಿ ಪ್ರಶಸ್ತಿಗೆ ಸುಂಟಿಕೊಪ್ಪದ ಪ್ರಜಾವಾಣಿ ವರದಿಗಾರ ಎಂ.ಎಸ್. ಸುನಿಲ್ ಬರೆದಿರುವ ‘ಬಡತನದ ಬೇಗೆಯಲ್ಲಿ ಅರಳಿದ ಸಂತೋಷ’ ವರದಿ ಆಯ್ಕೆಯಾಗಿದೆ.

ಕೂಗೂರಿನ ಯಶಸ್ವಿನಿ ಚಂದ್ರಕಾAತ್ ಅವರು, ತಮ್ಮ ತಂದೆ ಕೂಗೂರು ಗ್ರಾಮದ ತಿಮ್ಮಪ್ಪ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ದೃಶ್ಯಮಾಧ್ಯಮ ವರದಿ ಪ್ರಶಸ್ತಿಯು ಚಿತ್ತಾರ ವಾಹಿನಿಯಲ್ಲಿ ಪ್ರಸಾರವಾದ ವಿಶ್ವ ಕುಂಬೂರು ಅವರ ವರದಿ ಆಯ್ಕೆಯಾಗಿದೆ ಎಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್‌ಕುಮಾರ್ ತಿಳಿಸಿದ್ದಾರೆ.

ತಾ. ೧೮ ರಂದು ವಾರ್ಷಿಕ ಮಹಾಸಭೆ: ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ತಾ. ೧೮ ರಂದು ಪೂರ್ವಾಹ್ನ ೧೦.೩೦ಕ್ಕೆ ಸ್ಥಳೀಯ ಸಫಾಲಿ ಸಭಾಂಗಣದಲ್ಲಿ ನಡೆಯಲಿದೆ. ಅಂದೇ ಪ್ರಶಸ್ತಿ ವಿತರಣೆ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್ ತಿಳಿಸಿದ್ದಾರೆ.