ಮಡಿಕೇರಿ, ಸೆ. ೧೪: ಕೊಡವ ಜನಾಂಗ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೊ) ಮುಖ್ಯಮಂತ್ರಿಗಳಿಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಲಾಗಿದೆ ಎಂದು ಸಂಘಟನೆ ಅಧ್ಯಕ್ಷ ಕೊಕ್ಕಲೇಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ವೀರಶೈವ ಲಿಂಗಾಯಿತ, ಒಕ್ಕಲಿಗ ಹಾಗೂ ಮರಾಠ ಸಮುದಾಯಗಳಿಗೆ ನೂತನವಾಗಿ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಗಿದೆ. ಕೊಡಗು ಜಿಲ್ಲೆಯ ಕೊಡವ ಜನಾಂಗಕ್ಕೂ ಸಹ ಒಂದು ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಅನಿವಾರ್ಯತೆ ಹಾಗೂ ಅವಶ್ಯಕತೆ ಇದೆ. ವಿಶಿಷ್ಟವಾದ ಸಂಸ್ಕೃತಿ, ಸಂಪ್ರದಾಯ, ಪರಂಪರೆಯೊAದಿಗೆ ವಿಶೇಷವಾದ ನಡೆ ನುಡಿಯನ್ನು ಮೈಗೂಡಿಸಿಕೊಂಡಿರುವ ಕೊಡವರು, ಎಲ್ಲಾ ಕ್ಷೇತ್ರಗಳಲ್ಲಿಯೂ ಗಮನಾರ್ಹ ಸೇವೆ ನೀಡುತ್ತಾ ಬಂದಿದ್ದಾರೆ. ಇದೀಗ ಜನಾಂಗದ ಸಮಗ್ರ ಅಭಿವೃದ್ಧಿಯ ದೃಷ್ಠಿಯಿಂದ ಅಭಿವೃದ್ಧಿ ನಿಗಮ ಸ್ಥಾಪಿಸುವ ಅನಿವಾರ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕೊಡವ ಜನಾಂಗದ ಶೇ. ೬೦ಕ್ಕಿಂತಲೂ ಹೆಚ್ಚಿನವರು ಹಿಂದುಳಿದವರಾಗಿದ್ದು, ಶೇ. ೩೦ ಕ್ಕಿಂತಲೂ ಹೆಚ್ಚಿನವರು ಬಡತನ ರೇಖೆಯ ಕೆಳಗಿರುವವರಾಗಿದ್ದಾರೆ. ಮಾತ್ರವಲ್ಲದೆ ಕೊಡವರ ಜನಸಂಖ್ಯೆಯು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ತಮ್ಮ ನೆಲದಲ್ಲಿಯೇ ಕೊಡವರು ಅತ್ಯಂತ ಅಲ್ಪ ಸಂಖ್ಯಾತರಾಗಿದ್ದಾರೆ ಎಂಬುವುದು ವಿಷಾದನೀಯ. ಹಾಗೆಯೇ ಪ್ರಸ್ತುತ ಮೀಸಲಾತಿ ವ್ಯವಸ್ಥೆಯಲ್ಲಿಯೂ ಕೊಡವರಿಗೆ ಯಾವುದೇ ಅವಕಾಶಗಳು ದೊರಕುತ್ತಿಲ್ಲ, ಮೇಲಾಗಿ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿಯೂ ಕೊಡವರು ರಾಜಕೀಯವಾಗಿ ದೇಶದಲ್ಲಿಯೇ ಅತ್ಯಂತ ದುರ್ಬಲ ಅಲ್ಪಸಂಖ್ಯಾತ ಸಮುದಾಯವಾಗಿದ್ದು, ಸರ್ಕಾರದ ಯಾವುದೇ ಪ್ರಮುಖ ಯೋಜನೆಗಳು ಹಾಗೂ ಅನುದಾನಗಳು ಅರ್ಹ ಕೊಡವರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಯುನೆಸ್ಕೋ ವರದಿಯಂತೆ ಅಳಿವಿನಂಚಿನಲ್ಲಿರುವ ಭಾಷೆಗಳ ಪಟ್ಟಿಯಲ್ಲಿ ಕೊಡವ ಭಾಷೆಯೂ ಗುರುತಿಸಿಕೊಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಕೊಡವರ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು, ರಾಜ್ಯ ಸರ್ಕಾರವು ಸಂವಿಧಾನದ ೧೬೨ನೇ ವಿಧಿಯಡಿಯಲ್ಲಿ ನೀಡಿರುವ ವಿವೇಚನಾಧಿಕಾರವನ್ನು ಬಳಸಿ ನೂತನವಾಗಿ ಕೊಡವ ಜನಾಂಗಕ್ಕಾಗಿಯೇ ಪ್ರತ್ಯೇಕ ‘ಕೊಡವ ಜನಾಂಗÀ ಅಭಿವೃದ್ಧಿ ನಿಗಮ’ ವನ್ನು ಸ್ಥಾಪಿಸಿ, ವಾರ್ಷಿಕವಾಗಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡುವುದರ ಮೂಲಕ ಕೊಡವ ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ಕಾರ್ಯಕ್ರಮವನ್ನು ರೂಪಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕೊಡವ ಜನಾಂಗ ಅಭಿವೃದ್ಧಿ ನಿಗಮದ ಮೂಲಕ ಕೊಡವರ ಪ್ರಮುಖ ಧಾರ್ಮಿಕ ಕೇಂದ್ರವಾದ ಐನ್‌ಮನೆಗಳ ಸಂರಕ್ಷಣೆ ಹಾಗೂ ಪುನಶ್ಚೇತನ., ಪಾರಂಪರಿಕ ತಾಣಗಳು ಹಾಗೂ ಪವಿತ್ರ ತಾಣಗಳಾದ ಮಂದ್‌ಮಾನಿ, ಅಂಬಲ, ಕ್ಯಾಕೊಳ, ಮಚಿನಿಕಾಡ್ ಮುಂತಾದ ಕೇಂದ್ರಗಳ ದಾಖಲೀಕರಣ, ಸಂರಕ್ಷಣೆ ಹಾಗೂ ಪುನರ್‌ನಿರ್ಮಾಣ, ಕೊಡವರ ಬುಡಕಟ್ಟು ಹಾಗೂ ಸಾಂಸ್ಕೃತಿಕ ಅಧ್ಯಯನ ಹಾಗೂ ಪುನಶ್ಚೇತನ, ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣ, ಮಹಿಳಾ ಹಾಗೂ ಮಕ್ಕಳ ಸಬಲೀಕರಣ, ಭಾಷಾ ಅಭಿವೃದ್ಧಿ ಹಾಗು ದಾಖಲೀಕರಣ, ಜನಾಂಗವೃದ್ಧಿ ಕುರಿತಂತೆ ಅಧ್ಯಯನ ಹಾಗೂ ಅಭಿವೃದ್ಧಿ ಯೋಜನೆಗಳು ಶಿಕ್ಷಣ, ಉನ್ನತ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವೃತ್ತಿಪರ ತರಬೇತಿ ಮುಂತಾದ ಸಮಯೋಚಿತ ಹಾಗೂ ಸಾಂಧರ್ಬಿಕ ಯೋಜನೆಗಳು, ಕೊಡವ ಪಾರಂಪರಿಕ ಮತ್ತು ಸಾಂಸ್ಕೃತಿಕ ವಿಶ್ವಗ್ರಾಮ ನಿರ್ಮಾಣದ ಗುರಿಯನ್ನು ಸಾಧಿಸಬಹುದಾಗಿದೆ ಎಂದು ಮಂಜು ಚಿಣ್ಣಪ್ಪ ವಿವರಿಸಿದ್ದಾರೆ.

ಈ ನಿಟ್ಟಿನಲ್ಲಿ ಸಂಘಟನೆಯು ತಳಮಟ್ಟದಿಂದ ಜಾಗೃತಿ ಮೂಡಿಸಿ ಕೊಡವ ತಕ್ಕ ಮುಖ್ಯಸ್ಥರು, ಕೊಡವ ಸಮಾಜಗಳು, ಸಂಘ ಸಂಸ್ಥೆಗಳು ಹಾಗೂ ಎಲ್ಲಾ ಜನಪ್ರತಿನಿಧಿಗಳನ್ನು ಸಂಘಟಿಸಿ ಹಂತಹAತವಾಗಿ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.