ಗೋಣಿಕೊಪ್ಪಲು, ಸೆ.೧೪: ಯುವಕನೊಬ್ಬ ತನ್ನ ವಾಹನಕ್ಕೆ ಅನಧಿಕೃತವಾಗಿ ಸರ್ಕಾರದ ನಾಮಫಲಕವನ್ನು ಅಳವಡಿಸಿಕೊಂಡು ಓಡಾಡುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಆತನ ಮೇಲೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಿAದ ಪ್ರವಾಸಕ್ಕಾಗಿ ಕೊಡಗಿಗೆ ಆಗಮಿಸಿದ ನಾಲ್ಕು ಜನರ ತಂಡ ತಮ್ಮ ವಾಹನಕ್ಕೆ ಕರ್ನಾಟಕ ಸರ್ಕಾರ ಎಂದು ನಾಮಫಲಕ ಅಳವಡಿಸಿಕೊಂಡು ಸಂಜೆಯ ವೇಳೆಯಲ್ಲಿ ಬಾಳೆಲೆ ಹೋಬಳಿಯ ನಿಟ್ಟೂರು, ಕಾರ್ಮಾಡು ಬಳಿಯ ಹೊಂಸ್ಟೇವೊAದರಲ್ಲಿ ವಾಸ್ತವ್ಯ ಹೂಡಲು ಕೊಠಡಿಯನ್ನು ಕೇಳಿದ್ದಾರೆ. ಸರ್ಕಾರದ ವಾಹನದಲ್ಲಿ ಆಗಮಿಸಿರುವವರ ಬಗ್ಗೆ ಅನುಮಾನಗೊಂಡ ಹೊಂಸ್ಟೇಯ ಮಾಲೀಕರು ಇವರನ್ನು ವಿಚಾರಿಸಿದ್ದಾರೆ. ಆದರೆ ಕಾರಿನಲ್ಲಿದ್ದ ಯುವಕರಿಂದ ಸರಿಯಾದ ಮಾಹಿತಿ ಲಭ್ಯವಾಗಲಿಲ್ಲ. ಕೊರೊನಾ ಸಂದರ್ಭದಲ್ಲಿ ಕೊಠಡಿ ನೀಡಲು ಸಾಧ್ಯವಿಲ್ಲವೆಂದು ನಿರಾಕರಿಸಿ ಇವರ ವಾಹನವನ್ನು ವಾಪಸ್ ಕಳುಹಿಸಿದ್ದಾರೆ.
ನಂತರ ವಾಹನವು ಗೋಣಿಕೊಪ್ಪ ಭಾಗದತ್ತ ತೆರಳಿದೆ. ಕಾರಿನಲ್ಲಿರುವವರ ಬಗ್ಗೆ ಅನುಮಾನಗೊಂಡ ಜನಪ್ರತಿನಿಧಿಯೋರ್ವರು ಕೂಡಲೇ ಪೊಲೀಸರ ಸಹಾಯವಾಣಿ ೧೧೨ ಕರೆ ಮಾಡಿ ಅನುಮಾನಾಸ್ಪದ ವಾಹನವು ಸರ್ಕಾರದ ನಾಮಫಲಕ ಅಳವಡಿಸಿ ಸಂಚಾರ ಮಾಡುತ್ತಿದೆ. ಗೋಣಿಕೊಪ್ಪ ನಗರದತ್ತ ವಾಹನವು ಆಗಮಿಸುತ್ತಿದೆ ಎಂದು ದೂರು ನೀಡಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಅನುಮಾನಾಸ್ಪದ ಕಾರು ಗೋಣಿಕೊಪ್ಪನಗರಕ್ಕೆ ಆಗಮಿಸುತ್ತಿ ದ್ದಂತೆಯೇ ತಪಾಸಣೆ ಗೊಳಪಡಿಸಿದ್ದಾರೆ.
ಈ ವೇಳೆ ಕಾರು ಚಾಲಕನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ ವೇಳೆ ಈತ ಕಾನೂನು ಬಾಹಿರವಾಗಿ ತನ್ನ ಕಾರಿಗೆ ಕರ್ನಾಟಕ ಸರ್ಕಾರ ಎಂದು ನಾಮಫಲಕ ಅಳವಡಿಸಿ ಕೊಂಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಕಾರಿನಲ್ಲಿ ಎರಡು ಯುವತಿಯರು ಸೇರಿದಂತೆ ಒಟ್ಟು ನಾಲ್ಕು ಮಂದಿ ಪ್ರವಾಸಕ್ಕಾಗಿ ಕೊಡಗಿಗೆ ಆಗಮಿಸಿದ್ದರು. ಠಾಣಾಧಿಕಾರಿಗಳು ಇವರ ವಿವರವನ್ನು ಪರಿಶೀಲಿಸಿದ ನಂತರ ಕಾರು ಚಾಲಕ ಖಾಲಿದ್ ಶರೀಫ್ ಮೇಲೆ ಖಾಸಗಿ ವಾಹನಕ್ಕೆ ಸರ್ಕಾರಿ ನಾಮಫಲಕ ಅಳವಡಿಸಿದ ಹಿನ್ನಲೆಯಲ್ಲಿ ಕ್ರಮ ಕೈಗೊಂಡು ಆತನ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರು ಸೇರಿದಂತೆ ನಾಮಫಲಕ, ನಂಬರ್‌ಪ್ಲೇಟ್ ವಶಕ್ಕೆ ಪಡೆಯಲಾಗಿದೆ.
-ಹೆಚ್.ಕೆ. ಜಗದೀಶ್