ಕಣಿವೆ, ಸೆ. ೧೪: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ನಿರಂತರವಾಗಿ ಕಾವೇರಿ ನದಿಯ ಜಲಮಾಲಿನ್ಯ ಮಾಡುತ್ತಿದೆ.

ಅಂದರೆ ನದಿಗೆ ನೇರವಾಗಿ ಕಲುಷಿತವಾದ ತ್ಯಾಜ್ಯ ನೀರನ್ನು ಹರಿಸುತ್ತಿದೆ. ಇದರಿಂದಾಗಿ ಕುಶಾಲನಗರ ಪಟ್ಟಣ ಸೇರಿದಂತೆ ಆಸುಪಾಸಿನ ಮುಳ್ಳುಸೋಗೆ, ಬೈಚನಹಳ್ಳಿ ಹಾಗೂ ಗುಮ್ಮನಕೊಲ್ಲಿ ಗ್ರಾಮಗಳ ೨೦ ಸಾವಿರ ಜನ ಈ ಕಲುಷಿತ ನೀರನ್ನು ಕುಡಿಯುವಂತಾಗಿದೆ.

ಯಾವುದೇ ನದಿಗಳಿಗೆ ಮತ್ತು ಜಲಮೂಲಗಳಿಗೆ ಹಾನಿ ಅಥವಾ ಕಲುಷಿತಗೊಳಿಸದಂತೆ ಎಚ್ಚರ ವಹಿಸುವ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಯಾಯ ಸ್ಥಳೀಯ ಆಡಳಿತಗಳಿಗೆ ಸ್ಪಷ್ಟ ನಿರ್ದೇಶನವಿದ್ದರೂ ಕೂಡ ನದಿಯ ದಂಡೆಗೊಳಪಡುವ ಯಾವುದೇ ಗ್ರಾಮ ಪಂಚಾಯಿತಿಗಳು ದಿಟ್ಟ ಕ್ರಮ ಕೈಗೊಳ್ಳುವಲ್ಲಿ ವೈಫಲ್ಯತೆ ಕಂಡಿವೆ. ಅದೇ ರೀತಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯೂ ಕೂಡ ನದಿಗೆ ಸೇರುತ್ತಿರುವ ಕಲುಷಿತ ನೀರನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿಲ್ಲ.

ಪಂಚಾಯಿತಿ ವ್ಯಾಪ್ತಿಗೊಳಪಡುವ ಮಾದಾಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಎದುರು ಇರುವ ಜನವಸತಿ ಪ್ರದೇಶದ ತ್ಯಾಜ್ಯನೀರು ಹಾಗು ಗಂಧದಕೋಟಿ ಬಳಿ ಇರುವ ಕೋಳಿ, ಕುರಿ, ಹಂದಿ ಮಾಂಸ ಮಳಿಗೆಗಳ ಪ್ರಾಣಿಗಳ ತ್ಯಾಜ್ಯ ನೇರವಾಗಿ ಕಾವೇರಿಯ ಒಡಲು ಸೇರುತ್ತಿದ್ದರೂ ಕೂಡ ಪಂಚಾಯಿತಿ ಅಧಿಕಾರಿಗಳಾಗಲೀ ಆಡಳಿತ ಮಂಡಳಿಯಾಗಲೀ ತಿಳಿದೂ ತಿಳಿಯದಂತೆ ಜಾಣ ಮೌನ ವಹಿಸಿದ್ದಾರೆ.

ಹಾಗಾಗಿ ಈ ಪಂಚಾಯಿತಿಯ ಬೇಜವಾಬ್ದಾರಿತನದಿಂದಾಗಿ ನದಿಯ ನೀರಿಗೆ ಸೇರುವ ಕಲುಷಿತ ನೀರನ್ನು ನದಿಯ ತಗ್ಗುಪ್ರದೇಶದಲ್ಲಿರುವ ಕುಶಾಲನಗರದ ಜನತೆ ಕುಡಿಯುವಂತಹ ದುಸ್ಥಿತಿ ಬಂದೊದಗಿದೆ.

ಇದೇ ಮಾದರಿಯಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವು ಬಡಾವಣೆಗಳ ಕಲುಷಿತ ನೀರು ನೇರವಾಗಿ ನದಿ ಸೇರುತ್ತಿದೆ.

ನದಿ ದಂಡೆಯಲ್ಲಿನ ಪಂಚಾಯಿತಿಗಳು ಆಯಾ ವ್ಯಾಪ್ತಿಯ ಬಡಾವಣೆಗಳ ಜನವಸತಿಯ ಕಲುಷಿತ ನೀರನ್ನು ಚರಂಡಿಗಳ ಮೂಲಕ ನದಿ ದಂಡೆಯವರೆಗೂ ತಂದು ನದಿ ದಂಡೆಯಲ್ಲಿ ಕಾಟಾಚಾರದ ಗುಂಡಿಯನ್ನು ತೆಗೆದು ಅದರೊಳಗೆ ಹರಿಯಬಿಡುತ್ತಾರೆ. ಆ ಗುಂಡಿ ತುಂಬಿ ತುಳುಕಿ ನದಿಯೊಳಗೆ ತ್ಯಾಜ್ಯ ಹರಿದರೂ ಕೂಡ ಸಂಬAಧಿಸಿದ ಸ್ಥಳೀಯ ಆಡಳಿತಗಳು ದಿವ್ಯ ನಿರ್ಲಕ್ಷö್ಯ ವಹಿಸುತ್ತಿವೆ.

ಜಿಲ್ಲಾಡಳಿತ ಹಾಗೂ ಪರಿಸರ ಇಲಾಖೆ ಕೂಡಲೇ ನದಿಯ ತೀರದುದ್ದಕ್ಕೂ ತೆರಳಿ ಸಮರ್ಪಕವಾದ ಪರಿಶೀಲನೆ ನಡೆಸಬೇಕು. ನದಿಯ ನೀರಿಗೆ ತ್ಯಾಜ್ಯ ಹರಿಸುತ್ತಿರುವ ಪಂಚಾಯಿತಿಗಳ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವ ಮೂಲಕ ಎಚ್ಚರಿಸಬೇಕಿದೆ ಎಂಬದು ಪ್ರಜ್ಞಾವಂತ ನಾಗರಿಕರ ಆಶಯವಾಗಿದೆ.

-ಮೂರ್ತಿ