ಕೂಡಿಗೆ, ಸೆ. ೧೩: ಜಿಲ್ಲೆಯ ರೈತರು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಕಳೆದ ಮೂರು ವರ್ಷಗಳಿಂದಲೂ ವಾಣಿಜ್ಯ ಬೆಳೆಯಾದ ಶುಂಠಿ ಬೇಸಾಯ ಮಾಡುತ್ತಾ ಸಾವಿರಾರು ರೂಪಾಯಿ ಖರ್ಚು ಮಾಡಿ ಬೇಸಾಯ ಮಾಡಿದ್ದರು. ಈ ಬಾರಿ ಬೆಲೆ ಕುಸಿತದ ಜೊತೆಗೆ ಕೊಳೆ ರೋಗ ಮತ್ತು ಕಡ್ಡಿ ರೋಗ ಹೆಚ್ಚಾಗಿ ರೈತರು ಆತಂಕ ಪಡುವಂತಹ ಪ್ರಸಂಗ ಎದುರಾಗಿದೆ. ಮಳೆಯಿಂದಾಗಿ ಕೊಳೆ ರೋಗ ಹೆಚ್ಚಾಗಿ ದಿನಕಳೆದಂತೆ ರೋಗ ಬೆಳೆಗೆ ಹರಡುತ್ತಿರುವುದರಿಂದ ಶುಂಠಿ ಬೆಳೆ ಜಮೀನಿನಲ್ಲಿಯೇ ಹಾಳಾಗುತ್ತಿದೆ. ರೈತರು ಬೆಳೆ ಹಾಳಾಗುವ ಬದಲು ಕೀಳಲು ಪ್ರಾರಂಭ ಮಾಡಿದರೂ ವ್ಯಾಪಾರಿಗಳು ಕೊಳ್ಳಲು ಸಿದ್ಧರಿಲ್ಲ ದಂತಹ ಪರಿಸ್ಥಿತಿ ಎದುರಾಗಿದೆ.
ಕಳೆದ ಮೂರು ವರ್ಷಗಳಿಂದಲೂ ಒಂದಲ್ಲ ಒಂದು ಸಮಸ್ಯೆಗಳನ್ನು ರೈತರು ಎದುರಿಸಿಕೊಂಡು ಬರುತ್ತಿದ್ದಾರೆ. ಇದರ ನಡುವೆ ಕೊರೊನಾ ಹಿನ್ನೆಲೆಯಲ್ಲಿ ಶುಂಠಿ ಮಾರುಕಟ್ಟೆಗಳು ಸಮರ್ಪಕವಾಗಿ ಕಾರ್ಯಾರಂಭ ಮಾಡಿದೆ ಬೆಲೆಯಲ್ಲಿ ಏರಿಳಿತ, ಜೊತೆಗೆ ವರ್ಷಗಳು ಕಳೆದಂತೆ ಶುಂಠಿ ಬೆಳೆಗೆ ರೋಗ ಭಾದೆಯು ಹೆಚ್ಚಾಗುತ್ತಿರುವುದರಿಂದ ಉತ್ತಮವಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ರೈತರು.
ಈ ಸಾಲಿನಲ್ಲಿ ಜಿಲ್ಲೆಯ ರೈತರು ಕಳೆದ ಸಾಲಿಗಿಂತ ಶುಂಠಿ ಬೆಳೆಗೆ ಉತ್ತಮವಾದ ಬೆಲೆ ಬರಬಹುದೆಂದು ಅಧಿಕ ಹಣವನ್ನು ಶುಂಠಿ ಬೀಜಕ್ಕೆ, ಭೂಮಿಗೆ ಮತ್ತು ನೀರಿನ ವ್ಯವಸ್ಥೆಗೆ, ಗೊಬ್ಬರಕ್ಕೆ ಖರ್ಚು ಮಾಡಿದ್ದಾರೆ. ಆದರೆ ಬೆಳೆ ಸ್ವಲ್ಪ ಮಟ್ಟಿಗೆ ಸುಧಾರಣೆ ಆಗುವ ರೀತಿಯಲ್ಲಿಯೇ ಬಂದರೂ, ಗದ್ದೆಗಳಲ್ಲಿ ಬೆಳೆ ನೋಡಲು ಚೆನ್ನಾಗಿ ಇದ್ದರೂ ಅದರ ಗಿಡಗಳು ದಿನಕಳೆದಂತೆ ಒಣಗಿ ನಂತರ ರೋಗ ಹರಡಲು ಆರಂಭವಾಗಿದೆ.
ಸಾವಿರಾರು ಎಕರೆಗಳಷ್ಟು ಪ್ರದೇಶದಲ್ಲಿ ಜಿಲ್ಲೆಯ ರೈತರು ಶುಂಠಿ ಬೆಳೆ ಬೆಳೆದಿದ್ದಾರೆ. ಆದರೆ ಶುಂಠಿ ಮಾರುಕಟ್ಟೆಯಲ್ಲಿ ಸಮರ್ಪಕವಾದ ಬೆಲೆ ಇಲ್ಲದೆ ಇದರ ಜೊತೆಯಲ್ಲಿ ಅಂತರರಾಜ್ಯ ಮಾರುಕಟ್ಟೆಯಲ್ಲಿ ಕಳೆದ ನಾಲ್ಕು ವರ್ಷಗಳ ಬೆಲೆ ಇದುವರೆಗೂ ಬಂದಿಲ್ಲ. ಕಳೆದ ನಾಲ್ಕು ವರ್ಷಗಳ ಹಿಂದೆ ಒಂದು ಚೀಲ ಶುಂಠಿ ೬೦ ಕೆ.ಜಿ.ಗೆ ಮೂರು ಸಾವಿರದಿಂದ ನಾಲ್ಕು ಸಾವಿರ ಬೆಲೆ ಇತ್ತು. ಆದರೆ ಕಳೆದ ಎರಡೂ ವರ್ಷಗಳಿಂದಲೂ ಹೊಸ ಶುಂಠಿಗೆ ರಾಜ್ಯ ಮತ್ತು ಅಂತರರಾಜ್ಯ ಮಾರುಕಟ್ಟೆಯಲ್ಲಿ ಕೇವಲ ೩೫೦ ರಿಂದ ೪೦೦ ರವರೆಗೆ ಮಾತ್ರ ಬೆಲೆ ಸಿಗುತ್ತಿದೆ. ಹಳೆಯ ಶುಂಠಿಗೆ ೧೨೦೦-೧೩೦೦ ರಷ್ಟು ಬೆಲೆ ಇದೆ.
ಅನೇಕ ಕಷ್ಟನಷ್ಟಗಳ ನಡುವೆ ಜಿಲ್ಲೆಯ ರೈತರು ಶುಂಠಿ ಬೆಳೆದರೂ ಬೆಲೆ ತೀರಾ ಕಡಿಮೆ. ಜೊತೆಗೆ ರೋಗ ಭಾದೆ ಕಾಡುತ್ತಿರುವುದರಿಂದ ಜಮೀನಿನಲ್ಲಿ ಶುಂಠಿ ಬೆಳೆಯನ್ನು ಬಿಡುವುದರ ಬದಲು ಕಿತ್ತುಹಾಕುವುದರಲ್ಲಿ ತೊಡಗಿದ್ದಾರೆ. ಕೀಳದಿದ್ದರೆ ರೋಗ ಹೆಚ್ಚಾಗಿ ಎಲ್ಲಾ ಪ್ರದೇಶಕ್ಕೆ ಹರಡುವುದರಿಂದ ನಷ್ಟವಾಗಲಿದೆ ಎಂದು ಕಡಿಮೆ ಬೆಲೆಯಾದರೂ ಸಿಕ್ಕಿದಷ್ಟು ಸಿಗಲಿ ಎಂದು ಶುಂಠಿಯನ್ನು ಕೀಳಲು ಪ್ರಾರಂಭ ಮಾಡಿದ್ದಾರೆ. ರೋಗದ ಶುಂಠಿ ಕಿತ್ತ ಗದ್ದೆಗಳಲ್ಲಿ ಬೇರೆ ಬೆಳೆಯನ್ನು ಬೆಳೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇಂದು ಒಂದು ಚೀಲಕ್ಕೆ ಕೇವಲ ರೂ. ೩೫೦ ಬೆಲೆ ಇತ್ತು. ಮಾರಾಟಗಾರರು ಖರೀದಿ ಮಾಡುತ್ತಿದ್ದಾರೆ. ಮಳೆಯ ನಡುವೆಯೂ ಶುಂಠಿ ಬೆಳೆಯನ್ನು ಕಿತ್ತು ಶುಂಠಿ ತೊಳೆಯುವ ಯಂತ್ರದ ಮೂಲಕ ತೊಳೆದು ಮೂಟೆಗಳಲ್ಲಿ ತುಂಬಿಸಿ ಹೊರ ರಾಜ್ಯದ ಮಾರುಕಟ್ಟೆಗೆ ಸಾಗಾಣಿಕೆ ಮಾಡುತ್ತಿರುವುದು ಕಂಡುಬAದಿತು. ಆದರೆ ಬೆಲೆಯ ಕುಸಿತದಿಂದಾಗಿ ಖರ್ಚು ಮಾಡಿದ ಹಣವೂ ಸಿಗುತ್ತಿಲ್ಲಾ ಎಂದು ಶುಂಠಿ ಬೆಳೆದ ರೈತರು ತಮ್ಮ ಅಳಲನ್ನು ತೋಡಿಕೊಂಡರು.
ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಂಠಿಯನ್ನು ಖರೀದಿ ಮಾಡುವವರು ಸ್ವಲ್ಪ ಮಟ್ಟಿಗೆ ಹಿಂದೇಟು ಹಾಕುತ್ತಿರುವುದು ಕಂಡು ಬರುತ್ತಿದೆ. ಅಂತರರಾಜ್ಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೆಲೆ ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಖರೀದಿ ಮಾಡಿದ ಬೆಲೆಯು ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಅದರಿಂದಾಗಿ ರೈತರಿಂದ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂಬದು ತಿಳಿದುಬಂದಿದೆ. ಕಳೆದ ಒಂದು ವಾರದಿಂದಲೂ ಕೇವಲ ರೂ. ೩೫೦ ರಿಂದ ೪೦೦ ಮಾತ್ರ ಬೆಲೆ ಇದೆ. ಆದರೆ ಮುಂದಿನ ತಿಂಗಳು ಗಳಲ್ಲಿ ಅಂತರರಾಜ್ಯ ಮಾರುಕಟ್ಟೆಯಲ್ಲಿ ಸ್ವಲ್ಪಮಟ್ಟಿಗೆ ಬೆಲೆ ಬರಬಹುದು ಎನ್ನುತ್ತಾರೆ ಕೂಡಿಗೆಯ ಶುಂಠಿ ಖರೀದಿದಾರ ಪ್ರಭು.
-ಕೆ.ಕೆ. ನಾಗರಾಜಶೆಟ್ಟಿ