ಸಿದ್ದಾಪುರ, ಸೆ. ೧೩: ೨೦೨೩ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತವೆಂದು ರಾಜ್ಯ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟೀರ ಪೊನ್ನಣ್ಣ ಹೇಳಿದರು.

ಮಾಲ್ದಾರೆ ಸಮೀಪದ ಗೂಡ್ಲೂರುವಿನಲ್ಲಿ ಬೇರೆ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ಹಾಗೂ ಬೆಳೆಸಲು ಕಾರ್ಯಕರ್ತರು ಶ್ರಮವಹಿಸಬೇಕೆಂದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರವು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆAದು ಆರೋಪಿಸಿದರು.

ಕೆಪಿಸಿಸಿ ಪ್ರಮುಖ ಟಿ.ಪಿ. ರಮೇಶ್ ಮಾತನಾಡಿ, ಒಂದು ಪಕ್ಷವನ್ನು ಒಪ್ಪಿಕೊಂಡು ಬಂದ ನಂತರ ಕಾರ್ಯಕ್ರಮಗಳಲ್ಲಿ ಮುಕ್ತವಾಗಿ ಭಾಗವಹಿಸುವ ಮೂಲಕ ನಾಯಕತ್ವವನ್ನು ರೂಪಿಸಿಕೊಳ್ಳ ಬೇಕೆಂದರು. ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದ ನಂತರ ಸುಳ್ಳು ಭರವಸೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದೆ ಯೆಂದು ಟೀಕಿಸಿದರು. ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಯಾ ಗ್ರಾಮ ಪಂಚಾಯಿತಿ ಕಚೇರಿ ಎದುರು ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆ ಮಾಡಬೇಕೆಂದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಮಾಲ್ದಾರೆ ಹಾಗೂ ಚೆನ್ನಯ್ಯನಕೋಟೆ ಭಾಗದ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಕಾರ್ಯಕರ್ತರು ನೀಡಿರುವ ಮನವಿ ಪತ್ರವನ್ನು ಸ್ವೀಕರಿಸಿ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು. ಅಲ್ಲದೆ ಗೂಡ್ಲೂರು ಸಮುದಾಯ ಭವನದ ಕಾಮಗಾರಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕೆಂದರು.

ಕಾAಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರಗಳು ದುರಾಡಳಿತ ನಡೆಸುತ್ತಿದೆ ಎಂದರು. ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಗೆ ನಡೆಯುವ ಚುನಾವಣೆ ಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದರು.

ಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಆದಿವಾಸಿ ಹೋರಾಟಗಾರ್ತಿ ದಿಡ್ಡಳ್ಳಿಯ ಮುತ್ತಮ್ಮ, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ರಂಜಿ ಪೂಣಚ್ಚ, ಗೂಡ್ಲೂರು ಕಾಂಗ್ರೆಸ್ ಮುಖಂಡ ಪ್ರಭಾಕರ್ ಮಾತನಾಡಿದರು.

ಇದೇ ಸಂದರ್ಭ ಮಾಲ್ದಾರೆ ಹಾಗೂ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಮುಖಂಡ ಮುಕ್ಕಾಟಿ ವಸಂತ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಲವಾರು ಮಂದಿ ಸೇರ್ಪಡೆಗೊಂಡರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯ ಅಬ್ರಾರ್, ಚೆನ್ನಯ್ಯನಕೋಟೆ ವಲಯ ಅಧ್ಯಕ್ಷ ವಾಟೇರಿರ ಸುರೇಶ್ ಸೋಮಯ್ಯ, ಮಾಲ್ದಾರೆ ವಲಯ ಅಧ್ಯಕ್ಷ ಸಜೀ ಥೋಮಸ್, ನರೇಂದ್ರ ಕಾಮತ್, ಚಿನ್ನಮ್ಮ, ನಿಯಾಜ್, ಕಿರಣ್, ಹನೀಫ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ನವೀನ್, ಜಾಲತಾಣ ವಿಭಾಗದ ಅಧ್ಯಕ್ಷ ಸೂರಜ್ ಹಾಗೂ ಇನ್ನಿತರರು ಹಾಜರಿದ್ದರು. ಬಾವ ಮಾಲ್ದಾರೆ ಕಾರ್ಯಕ್ರಮ ನಿರೂಪಿಸಿ, ಸಜೀ ಥೋಮಸ್ ವಂದಿಸಿದರು.