ಮಡಿಕೇರಿ, ಸೆ. ೧೨: ಕೊಡವ ಭಾಷೆ ಹಾಗೂ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸುವ ಕೆಲಸವಾಗಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಆಶಯ ವ್ಯಕ್ತಪಡಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿ ಸಲಾಗಿದ್ದ ೨೦೧೯-೨೦ ಮತ್ತು ೨೦೨೦-೨೧ನೇ ಸಾಲಿನ ಗೌರವ ಪ್ರಶಸ್ತಿ , ಪುಸ್ತಕ ಪ್ರಶಸ್ತಿ ವಿತರಣೆ ಹಾಗೂ ಕೊಡವ ಶಬ್ಧಕೋಶ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡವ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪನೆ ಮಾಡಲಾಗಿದ್ದು, ಕೊಡವ ಸಾಹಿತ್ಯ ಅಕಾಡೆಮಿ ಕೇವಲ ಕೊಡಗಿನಲ್ಲಿ ಮಾತ್ರ ಕಾರ್ಯಕ್ರಮಗಳನ್ನು ನಡೆಸದೆ ಬೇರೆ ಬೇರೆ ಕಡೆಗಳಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕೊಡವ ಭಾಷೆ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸುವ ಕೆಲಸವನ್ನು ಮಾಡಬೇಕೆಂದು ಹೇಳಿದರು.
ಕೊಡವ ಸಂಸ್ಕೃತಿ, ಆಚಾರ ವಿಚಾರ ಗ್ರಾಮೀಣ ಭಾಗಗಳಲ್ಲಿ ಇನ್ನೂ ಜೀವಂತವಾಗಿದೆ ಎಂದು ಅಭಿಪ್ರಾಯಿಸಿದ ರಂಜನ್, ಗ್ರಾಮೀಣ ಭಾಗಗಳಲ್ಲಿ ಅಕಾಡೆಮಿಯಿಂದ ಕೊಡವ ಸಂಸ್ಕೃತಿಯ ಸಂಬAಧ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವಂತಾಗಬೇಕೆAದು ನುಡಿದರು. ನಮ್ಮ ಭಾಷೆಯ ಬಗ್ಗೆ ನಮಗೆ ಅಭಿಮಾನ ಇರುವುದರ ಜೊತೆಗೆ ಇತರ ಭಾಷೆಗಳ ಬಗ್ಗೆಯೂ ಗೌರವವಿರಬೇಕೆಂದು ಅಪ್ಪಚ್ಚುರಂಜನ್ ಅಭಿಪ್ರಾಯಿಸಿದರು. ಕೊಡವ ಶಬ್ಧಕೋಶ ಬಿಡುಗಡೆ ಮಾಡಿದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕೊಡವ ಸಂಸ್ಕೃತಿಯ ಬಗ್ಗೆ ನಾವು ಅರಿತುಕೊಂಡು ಅದನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸಬೇಕು. ಕೊಡವ - ಅರೆಭಾಷೆ ಅಭಿವೃದ್ಧಿ ನಿಗಮ ರಚನೆಯಾಗು ವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದೆಂದು ಹೇಳಿದರು.
ಕರ್ನಾಟಕ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಮಾತನಾಡಿ, ಹಿರಿಯರಿಂದ ಕಲಿತ ಆಚಾರ - ವಿಚಾರ ನಡೆ- ನುಡಿ - ಸಂಸ್ಕೃತಿಯನ್ನು ನಾವು ಮುಂದುವರೆಸಿ ಕೊಂಡು ಹೋಗುತ್ತಿದ್ದೇವೆ. ಸರ್ಕಾರ ಕೂಡ ಸಹಕಾರ ನೀಡುತ್ತಿದೆ. ಎಲ್ಲವನ್ನೂ ಸರ್ಕಾರ ಮಾಡಿಕೊಡಲಿದೆ ಎಂಬ ಖಾತರಿ ಇಲ್ಲ. ಸರ್ಕಾರದ ಮೇಲೂ ಒತ್ತಡ ಇರುತ್ತದೆ. ನಾವುಗಳೂ ಬೆಂಬಲ ಸಹಕಾರ ನೀಡಬೇಕು; ಕೊಡವ ಹಾಗೂ ಅರೆಭಾಷೆ ಬೆಳವಣಿಗೆ ಪ್ರಾಧಿಕಾರ, ಆಯೋಗ, ಮಂಡಳಿಗಳು ಬೇಕೆಂಬ ಬೇಡಿಕೆಗಳು ಕೇಳಿಬರುತ್ತಿದ್ದು, ಈ ಕಾರ್ಯವನ್ನು ಸರ್ಕಾರದೊಂದಿಗೆ ಸೇರಿಕೊಂಡು ನಾವು ಮಾಡಬೇಕಿದೆ ಎಂದು ಹೇಳಿದರು.
ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೊಕ್ಕಲೆರ ಸುಜುತಿಮ್ಮಯ್ಯ ಮಾತನಾಡಿ, ಸಂಸ್ಕೃತಿಯಲ್ಲಿ ಗೋಚರ ಮತ್ತು ಅಗೋಚರ ಎಂಬ ಎರಡು ವಿಧಗಳಿವೆ. ನಮ್ಮ ಉಡುಗೆ ತೊಡುಗೆ, ಆಚರಣೆ ಗೋಚರವಾಗುತ್ತದೆ. ಆದರೆ ಕೆಲವರ ಜ್ಞಾನಭಂಡಾರದಲ್ಲಿರುವ ಭಾವನೆಗಳು, ಆಲೋಚನೆಗಳು ಅಗೋಚರವಾದುದು, ಇಂತವುಗಳನ್ನು ಹೊರಗೆ ತಂದು ಗೌರವಿಸಬೇಕೆಂದರು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಮಾತನಾಡಿ, ಎಲ್ಲರೂ ಒಟ್ಟಾಗಿ
(ಮೊದಲ ಪುಟದಿಂದ) ಬೆಳವಣಿಗೆಯಾಗಬೇಕಿದೆ. ಮೊದಲು ಎಲ್ಲರೂ ಒಗ್ಗಟ್ಟಾಗಬೇಕು; ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕೆಂದರು. ಹಂಪಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಐಕೋಳಂಡ ಪ್ರಶಾಂತ್ ಭೀಮಯ್ಯ ಮಾತನಾಡಿ, ಸಂಸ್ಕೃತಿಯ ರಕ್ಷಣೆ ಸವಾಲಾಗುತ್ತಿರುವ ಪ್ರಸ್ತುತದ ಕಾಲಘಟ್ಟದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಭಾಷೆ ಸಂಸ್ಕೃತಿ ಉಳಿವಿಗೆ ಸಹಕಾರಿ ಎಂದು ನುಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಮಾತನಾಡಿ, ಕೊಡವ ಸಂಸ್ಕೃತಿ ಶ್ರೀಮಂತ ಸಂಸ್ಕೃತಿಯಾಗಿದ್ದು, ಅದನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆಯಿತ್ತರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಸಾಂಸ್ಕೃತಿಕ ಭಾಷೆಯಾಗಿ ರುವ ಕೊಡವ ಭಾಷೆ ಓದುವ ಭಾಷೆ ಯಾಗಬೇಕು. ಕೊಡವ ಭಾಷೆಯಲ್ಲಿ ಲಿಪಿ ರಚಿಸಲು ಪ್ರಯತ್ನಿ ಸಲಾಗುತ್ತಿದ್ದು, ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಶೋಧನಾ ಸಂಸ್ಥೆಯಲ್ಲಿ ಪ್ರಯತ್ನಗಳು ನಡೆದಿವೆ ಎಂದರು.
ಪ್ರಶಸ್ತಿ ಪ್ರದಾನ
೨೦೧೯-೨೦ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಆದ ಮೊಣ್ಣಂಡ ಶೋಭಾ ಸುಬ್ಬಯ್ಯ (ಕೊಡವ ಸಾಹಿತ್ಯ ಕ್ಷೇತ್ರ) ದಿ. ಕಾಮೆಯಂಡ ಸಿ. ಅಯ್ಯಣ್ಣ (ಕೊಡವ ಜಾನಪದ ಕಲಾಕ್ಷೇತ್ರ) ಕಂಬೀರAಡ ಕಾವೇರಿ ಪೊನ್ನಪ್ಪ, ೨೦೨೦-೨೧ನೇ ಸಾಲಿನಲ್ಲಿ ಬಡಕಡಮ್ಮಂಡ ಕಸ್ತೂರಿ ಗೋವಿಂದಮ್ಮಯ್ಯ (ಕೊಡವ ಸಾಹಿತ್ಯ ಕ್ಷೇತ್ರ) ಬೊಟ್ಟೋಳಂಡ ಕಾಶಿ ಅಚ್ಚಯ್ಯ (ಕೊಡವ ಜಾನಪದ ಕ್ಷೇತ್ರ), ಅಪ್ಪನೆರವಂಡ ಕಿರಣ್ ಸುಬ್ಬಯ್ಯ (ಭಾಷಾ ಹಾಗೂ ಶಿಲ್ಪಕಲಾ ಕ್ಷೇತ್ರ) ಇವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ. ಕಾಮೆಯಂಡ ಸಿ. ಅಯ್ಯಣ್ಣ ಅವರ ಪರವಾಗಿ ಅವರ ಕುಟುಂಬದವರು ಪ್ರಶಸ್ತಿ ಸ್ವೀಕರಿಸಿದರು.
೨೦೧೯-೨೦ನೇ ಸಾಲಿನ ಪುಸ್ತಕ ಪ್ರಶಸ್ತಿಗೆ ಭಾಜನರಾದ ಪೊಂಜAಗ್ ಕವನ ಸಂಕಲನಕ್ಕೆ ಬಾಚರಣಿಯಂಡ ಅಪ್ಪಣ್ಣ ಮತ್ತು ರಾಣು ಅಪ್ಪಣ್ಣ ದಂಪತಿ, ಮಹಾವೀರ ಅಚ್ಚುನಾಯಕ ಕಾದಂಬರಿಗೆ ಕಾಡ್ಯಮಾಡ ರೀಟಾ ಬೋಪಯ್ಯ, ಬದ್‌ಕ್ ಪಿಂಞ ದೇಚವ್ವ ನಾಟಕ ಪುಸ್ತಕಕ್ಕೆ ಅಡ್ಡಂಡ ಸಿ. ಕಾರ್ಯಪ್ಪ ಇವರುಗಳು ಪ್ರಶಸ್ತಿ ಸ್ವೀಕರಿಸಿದರು. ೨೦೨೧-೨೨ನೇ ಸಾಲಿನಲ್ಲಿ ಪುಸ್ತಕ ಪ್ರಶಸ್ತಿಗೆ ಆಯ್ಕೆ ಆದ ನಾಡಪೆದ ಆಶಾ ಕಾದಂಬರಿಗೆ ನಾಗೇಶ್ ಕಾಲೂರ್, ನಂಗದಾರ್ ಕೊಡವ ಪುಸ್ತಕಕ್ಕೆ ಮಾಳೇಟಿರ ಸೀತಮ್ಮ ವಿವೇಕ್, ನಾಟಕರಂಗ ಪುಸ್ತಕಕ್ಕೆ ಉಳುವಂಗಡ ಕಾವೇರಿ ಉದಯ ಪ್ರಶಸ್ತಿ ಸ್ವೀಕರಿಸಿದರು.
ಪುಸ್ತಕ ಬಿಡುಗಡೆ
ದಿ. ಇಂದಿರಾ ಕಲ್ಯಾಣ ಸುಂದರA ಅವರ ವಾಲ್ಮೀಕಿರ ರಾಮಾಯಣ, ಕಸ್ತೂರಿ ಗೋವಿಂದಮ್ಮಯ್ಯ ಮತ್ತು ಬಾಚಮ್ಮಂಡ ಗೌರಮ್ಮ ಮಾದಮ್ಮಯ್ಯ ಅವರ ಕಾವೇರಿ ಪಳಮೆ, ಉಳುವಂಗಡ ಕಾವೇರಿ ಉದಯ ಅವರ ನೆಮ್ಮದಿಯ ಗೂಡ್, ಚೊಟ್ಟೆಯಂಡಮಾಡ ಲಲಿತಾ ಕಾರ್ಯಪ್ಪ ಅವರ ಮನಸ್ಸ್ರ ನೊಂಬಲ, ಐತಿಚಂಡ ರಮೇಶ್ ಉತ್ತಪ್ಪ ಅವರ ಕಥೆಪುತ್ತ್ ಪುಸ್ತಕಗಳನ್ನು ಇದೇ ಸಂದರ್ಭ ಬಿಡುಗಡೆ ಮಾಡ ಲಾಯಿತು. ಇದೇ ವೇಳೆ ಕೊಡವ ಶಬ್ಧಕೋಶ ತಯಾರಿಕೆಗೆ ಶ್ರಮಿಸಿದವ ರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕನ್ನಿಕಂಡ ಶ್ಯಾಂ ಸುಬ್ಬಯ್ಯ ಅಕಾಡೆಮಿ ಸದಸ್ಯರಾದ ಗೌರಮ್ಮ ಮಾದಮ್ಮಯ್ಯ, ಡಾ. ಸುಭಾಷ್ ನಾಣಯ್ಯ, ಜಾನಕಿ ಮಾಚಯ್ಯ, ಡಾ. ರೇವತಿ ಪೂವಯ್ಯ, ಬಬ್ಬಿರ ಸರಸ್ವತಿ, ಕುಡಿಯರ ಮುತ್ತಪ್ಪ, ಪ್ರಭುಕುಮಾರ್, ಕವನ್ ಕಾರ್ಯಪ್ಪ, ರಿಜಿಸ್ಟಾರ್ ಗಿರೀಶ್ ಇತರರು ಇದ್ದರು. ಮುಕ್ಕೋಡ್ಲುವಿನ ವ್ಯಾಲಿಡ್ಯೂ ಕಲ್ಚರ್ ಅಸೋಸಿಯೇಷನ್ ನಿಂದ ಬೊಳಕಾಟ್, ಕೋಲಾಟ್, ಕತ್ತಿಯಾಟ್, ಉಮ್ಮತಾಟ್, ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಶಾಲೆ ಕಲಾವಿದರಿಂದ ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮ ನಡೆಯಿತು. ಸೌಮ್ಯ ತಂಡ ಪ್ರಾರ್ಥಿಸಿ, ತೇಲಂಡ ಕವನ್ ಕಾರ್ಯಪ್ಪ ನಿರೂಪಿಸಿದರು. ನಾಪಂಡ ರವಿಕಾಳಪ್ಪ ಸ್ವಾಗತಿಸಿ, ಎಂ.ಎಸ್. ಶಂಭಯ್ಯ ವಂದಿಸಿದರು.