ಮಡಿಕೇರಿ, ಸೆ. ೧೧: ಯಾವುದೇ ಕ್ಷೇತ್ರದಲ್ಲಿ ತೊಡಗಿಸಿಕೊಂಡರೂ ಛಾಪು ಮೂಡಿಸಿಕೊಂಡು ಬರಬೇಕು, ಮಕ್ಕಳಲ್ಲಿ ಸಾಧನೆ ಮಾಡುವ ಛಲವಿರಬೇಕೆಂದು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಹೇಳಿದರು.

ಮಡಿಕೇರಿಯ ಹಿಲ್‌ರಸ್ತೆಯಲ್ಲಿರುವ ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಸಂಸ್ಥೆಯ ವತಿಯಿಂದ ಆನ್‌ಲೈನ್ ಮೂಲಕ ಆಯೋಜಿಸಿದ್ದ ನೃತ್ಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಒಲಂಪಿಕ್ಸ್ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾg Àರಾಗಿದ್ದ ಅಂಕಿತಾ ಸುರೇಶ್‌ಗೆ ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪೊಲ್ಗೊಂಡು ಅವರು ಮಾತನಾಡಿದರು. ನೃತ್ಯ ತರಗತಿಗಳನ್ನು ಆರಂಭ ಮಾಡುವದು ಸುಲಭ ಆದರೆ ನಡೆಸಿಕೊಂಡು ಹೋಗುವುದು ದೊಡ್ಡ ಜವಾಬ್ದಾರಿ. ಎಷ್ಟೋ ನೃತ್ಯ ಸಂಸ್ಥೆಗಳು ಅರ್ಧಕ್ಕೆ ನಿಂತು ಹೋಗಿವೆ. ಅರ್ಧಕ್ಕೆ ನಿಲ್ಲಿಸಿದರೆ ಮಕ್ಕಳು ಅತಂತ್ರರಾಗುತ್ತಾರೆ ಎಂದು ಹೇಳಿದರು.

ಪ್ರಕೃತಿ ವಿಕೋಪ, ಕೊರೊನಾದಿಂದಾಗಿ ಎಲ್ಲರ ಮನಸು ಚಂಚಲವಾಗಿದೆ. ಮಕ್ಕಳ ಮನಸುಗಳು ಕರಗಿ ಹೋಗಿವೆ. ಇಂತಹ ಸಂದರ್ಭದಲ್ಲೂ ಆನ್‌ಲೈನ್ ಮೂಲಕ ನೃತ್ಯ ಸ್ಪರ್ಧೆ ಏರ್ಪಡಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿರುವದು ಉತ್ತಮ ಕಾರ್ಯವೆಂದು ಹೇಳಿದ ಅವರು, ಆನ್‌ಲೈನ್ ಕಲಿಕೆ ಶಾಲೆಯಲ್ಲಿ ಕಲಿತಂತೆ ಆಗುವದಿಲ್ಲ. ಸಾಕಷ್ಟು ವ್ಯತ್ಯಾಸವಿರುತ್ತದೆ. ಹಾಗಾಗಿ ಇಂತಹ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯವೆಂದರು.

ಮತ್ತೋರ್ವ ಅತಿಥಿ ಪತ್ರಕರ್ತ, ಶಕ್ತಿ ಪತ್ರಿಕೆ ಉಪಸಂಪಾದಕ ಕುಡೆಕಲ್ ಸಂತೋಷ್ ಮಾತನಾಡಿ, ಮಕ್ಕಳು ಓದಿನಲ್ಲಿ ಮಾತ್ರವಲ್ಲದೆ, ಸಂಗೀತ, ನೃತ್ಯ, ಕ್ರೀಡೆ ಹೀಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಸಾಧನೆಯೊಂದಿಗೆ ಹೆಸರು ಗಳಿಸಬಹುದೆಂದು ಹೇಳಿದರು. ಆನ್‌ಲೈನ್ ತರಗತಿಗಳಿಗಿಂತ ಪ್ರತ್ಯಕ್ಷವಾಗಿ ಕಲಿಯುವದರಿಂದ ಮಕ್ಕಳ ಬೆಳವಣಿಗೆಗೆ ಪೂರಕವಾಗಲಿದೆ. ಎಲ್ಲದಕ್ಕೂ ಪ್ರಯತ್ನ ಮುಖ್ಯ, ಮಕ್ಕಳ ಸಾಧನೆಗೆ ಪೋಷಕರ ಸಹಕಾರ ಅತ್ಯಗತ್ಯವೆಂದರು.

ನಗರಸಭಾ ಸದಸ್ಯೆ ಸವಿತಾ ರಾಖೇಶ್ ಮಾತನಾಡಿ, ಪೋಷಕರು ಮಕ್ಕಳನ್ನು ನೃತ್ಯ ಶಾಲೆಗಳಿಗೆ ಕಳುಹಿಸಿದರೆ ಮಾತ್ರ ಶಾಲೆಯನ್ನು ಮುನ್ನಡೆಸಲು ಸಾಧ್ಯ. ಯಾವದೇ ಸಂಸ್ಥೆಯ ಸಾಧನೆಗೆ ಪೋಷಕರೇ ಕಾರಣಕರ್ತರು, ಅವರುಗಳ ಪ್ರೋತ್ಸಾಹ ಅತಿ ಅಗತ್ಯವೆಂದು ಹೇಳಿದರು. ಕೊಡಗಿನಲ್ಲಿ ನೃತ್ಯ ಕಲಿಕೆಗೆ ಅವಕಾಶ ಕಡಿಮೆ. ಆದರೂ ಇರುವಂತಹ ಶಾಲೆಗಳು ತರಬೇತಿ ನೀಡುತ್ತಾ, ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವೆಂದರು.

ಇದೇ ಸಂದರ್ಭದಲ್ಲಿ ಅಂಕಿತಾ ಸುರೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂಕಿತಾ, ಪೋಷಕರು, ಗುರುಗಳ ಪ್ರೋತ್ಸಾಹ ಇದ್ದರೆ ಮಕ್ಕಳು ಸಾಧನೆ ಮಾಡುತ್ತಾರೆ. ನೃತ್ಯ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಬೇಕಾದರೆ ತ್ಯಾಗ ಮಾಡಬೇಕಾಗುತ್ತದೆ. ದೇಹವನ್ನು ದಂಡಿಸಬೇಕಾಗುತ್ತದೆ ಎಂದರು. ಕ್ರೀಡೆಗೆ ಮೈದಾನ, ನೃತ್ಯಕ್ಕೆ ವೇದಿಕೆ ಅತ್ಯವಶ್ಯವೆಂದು ಹೇಳಿದ ಅವರು, ನೃತ್ಯ ಶಾಲೆ ಅಂತರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಿಂಗ್ಸ್ ಆಫ್ ಕೂರ್ಗ್ನ ನೃತ್ಯ ಸಂಯೋಜಕ ಮಹೇಶ್, ಜಿಲ್ಲೆಯಲ್ಲಿ ಸಾಕಷ್ಟು ನೃತ್ಯ ಸಂಸ್ಥೆಗಳಿದ್ದು, ಹಲವಾರು ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ಆದರೆ ಸಮರ್ಪಕವಾದ ಒಂದೇ ಒಂದು ವೇದಿಕೆಯಿಲ್ಲ. ಯಾವದಾದರೂ ಕಲ್ಯಾಣ ಮಂಟಪಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಅನಿವಾರ್ಯತೆ ಉಂಟಾಗಿದೆ. ಹಾಗಾಗಿ ಮಡಿಕೇರಿಯಲ್ಲಿ ಸಮರ್ಪಕವಾದ ವೇದಿಕೆ ಕಲ್ಪಿಸುವಂತೆ ನಗರಸಭಾ ಸದಸ್ಯೆ ಸವಿತಾ ರಾಖೇಶ್ ಅವರಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ಶ್ರೀ ಕೋದಂಡರಾಮ ದೇವಾಲಯ ಸಮಿತಿ ಅಧ್ಯಕ್ಷ ಮಂಜುನಾಥ್ ಇದ್ದರು. ಇದೇ ಸಂದರ್ಭದಲ್ಲಿ ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದ ನೃತ್ಯಪಟುಗಳಿಗೆ ಬಹುಮಾನ ವಿತರಿಸಲಾಯಿತು.