ಗೋಣಿಕೊಪ್ಪಲು, ಸೆ. ೧೧: ಕಾಡಾನೆಯ ಉಪಟಳದಿಂದ ರೈತ ದಿನನಿತ್ಯ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಎದುರಿಸುತ್ತಿದ್ದು ಕಂಗಾಲಾಗಿದ್ದಾನೆ. ಕೃಷಿಯನ್ನೇ ಆಧಾರವಾಗಿಟ್ಟುಕೊಂಡು ದುಡಿಯುತ್ತಿರುವ ರೈತನಿಗೆ ಕಾಡಾನೆಗಳ ಕಾಟದಿಂದ ಬೆಳೆದ ಫಸಲುಗಳು ಇವುಗಳ ಪಾಲಾಗುತ್ತಿವೆ. ಇದರಿಂದ ರೈತ ಸಂಕಷ್ಟಕ್ಕೀಡಾಗಿದ್ದು ಮುಂದೇನು ಎಂಬುವ ಪ್ರಶ್ನೆ ಕಾಡುತ್ತಿದೆ.

ಕಾಡಾನೆಗಳ ಉಪಟಳದ ನಡುವೆ ಭತ್ತದ ಗದ್ದೆಯನ್ನು ಹದ ಮಾಡಿದ ರೈತ ಬೀಜ ಬಿತ್ತಿ ನಾಟಿ ಮಾಡಿದ್ದ. ಪೈರುಗಳು ಬೆಳೆಯುತ್ತಿದ್ದಂತೆ ಕಾಡಾನೆಯ ಹಿಂಡು ಗದ್ದೆಗಳಿಗೆ ದಾಳಿ ಇಟ್ಟು ದಾಂಧಲೆ ನಡೆಸಿವೆ.ಅಲ್ಲದೆ ಸಮೀಪದ ಕಾಫಿ ತೋಟಕ್ಕೆ ತೆರಳಿ ಅಲ್ಲಿ ಬೆಳೆದಿದ್ದ ಕರಿಮೆಣಸಿನ ಬಳ್ಳಿಯನ್ನು ಹಾಳು ಮಾಡಿರುವುದಲ್ಲದೆ ಫಸಲು ಭರಿತ ಅಡಿಕೆ ಮರಗಳನ್ನು ಬುಡ ಸಹಿತ ಕಿತ್ತು ಹಾಕಿವೆ. ತೋಟದಲ್ಲಿನ ಕಾಫಿ ಗಿಡಗಳ ರೆಕ್ಕೆಗಳನ್ನು ಹಾಳು ಗೆಡವಿವೆ. ಇದರಿಂದ ರೈತ ನಷ್ಟ ಅನುಭವಿಸುವಂತಾಗಿದೆ

ದ.ಕೊಡಗಿನ ಶ್ರೀಮಂಗಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುರ್ಚಿ ಗ್ರಾಮದ ರೈತರಾದ ಅಜ್ಜಮಾಡ ಬೊಳ್ಳು ಗಣಪತಿ ಹಾಗೂ ಅಪ್ಪಯ್ಯ ಅವರು ತಮ್ಮ ಭೂಮಿಯಲ್ಲಿ ಭತ್ತ ಕೃಷಿ ಮಾಡಿದ್ದರು. ಸುತ್ತ ಮುತ್ತಲಿನ ರೈತರು ಕೂಡ ಗದ್ದೆಯನ್ನು ಪಾಳು ಬಿಡದೆ ನಾಟಿ ಮಾಡಿದ್ದರು. ಈ ಭಾಗದಲ್ಲಿ ನೂರಾರು ಏಕರೆ ಭತ್ತದ ಗದ್ದೆಗಳಿದ್ದು ವರ್ಷಂಪ್ರತಿ ರೈತರು ತಮ್ಮ ಗದ್ದೆಗಳನ್ನು ಕಾಡಾನೆಯ ಹಾವಳಿ ಇದ್ದರೂ ನಾಟಿ ಮಾಡಿ ಭತ್ತ ಬೆಳೆಯುತ್ತಾರೆ. ಕೊನೆಗೆ ಸಿಕ್ಕಿದ ಫಸಲನ್ನು ಮನೆಗೆ ಕೊಂಡೊಯ್ಯುತ್ತಾರೆ.

ಆದರೆ ಈ ಬಾರಿ ಭತ್ತ ಬೆಳೆಯುವ ಸಂದರ್ಭವೇ ಭತ್ತದ ಗದ್ದೆಗೆ ಕಾಡಾನೆಯ ಹಿಂಡು ರಾತ್ರಿ ವೇಳೆ ಧಾಳಿ ಮಾಡಿ ಧಾಂದಲೆ ನಡೆಸಿದೆ. ಇದರಿಂದಾಗಿ ಭತ್ತದ ಬೆಳೆಗಳು ನಾಶಗೊಂಡಿವೆ. ೧೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾಡಾನೆಗಳು ಗದ್ದೆಗೆ ಇಳಿದಿರುವುದರಿಂದ ಫಸಲು ಸಂಪೂರ್ಣ ಹಾಳಾಗಿದೆ.

ಈ ಭಾಗದ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳು ನಿರಂತರವಾಗಿ ಬೀಡು ಬಿಟ್ಟಿದ್ದು ಸಂಜೆಯ ವೇಳೆಯಲ್ಲಿ ಸಮೀಪದ ರೈತರ ಗದ್ದೆಗಳಿಗೆ ತೆರಳಿ ಫಸಲುಗಳನ್ನು ನಾಶ ಮಾಡುತ್ತಿವೆ. ಏಕಾ ಏಕಿ ಧಾಳಿ ನಡೆಸುತ್ತಿರುವುದರಿಂದ ಗದ್ದೆ ಸಂಪೂರ್ಣ ಹಾಳಾಗಿವೆ. ಮುಂಜಾನೆವರೆಗೂ ಭತ್ತದ ಗದ್ದೆಯಲ್ಲಿಯೇ ಬೀಡು ಬಿಡುವ ಈ ಕಾಡಾನೆಯ ಹಿಂಡು ಬೆಳಕು ಹರಿಯುತ್ತಿದ್ದಂತೆ ಸಮೀಪದ ಕಾಡಿಗೆ ತೆರಳುತ್ತಿವೆ.

ಚಿತ್ರ ವರದಿ, ಹೆಚ್.ಕೆ. ಜಗದೀಶ್