ಗೋಣಿಕೊಪ್ಪ ವರದಿ, ಸೆ. ೯: ರಕ್ತಹೀನತೆ ಸಮಸ್ಯೆ ಗಿರಿಜನ ಗರ್ಭಿಣಿಯರಲ್ಲಿ ಹೆಚ್ಚಾಗುತ್ತಿದ್ದು, ಪೌಷ್ಟಿಕ ಆಹಾರ ಸೇವನೆ ನಿರ್ಲಕ್ಷö್ಯ ಮಾಡಬೇಡಿ ಎಂದು ವೀರಾಜಪೇಟೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್ ಹೇಳಿದರು.

ವಿವೇಕಾನಂದ ಯೂತ್ ಮೂವ್‌ಮೆಂಟ್, ವೀರಾಜಪೇಟೆ ತಾಲೂಕು ಆರೋಗ್ಯ ಇಲಾಖೆ ಹಾಗೂ ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದಲ್ಲಿ ಕಾನೂರು ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಗಿರಿಜನ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮ ಮಟ್ಟದಲ್ಲಿ ಆರೋಗ್ಯ ಕಾರ್ಯಕರ್ತರು ನೀಡುವ ಸಲಹೆ, ಮಾರ್ಗದರ್ಶನ ಪಡೆಯಬೇಕು. ರಕ್ತಹೀನತೆ ಸಮಸ್ಯೆ ಗಿರಿಜನ ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ. ಗರ್ಭಾವಸ್ಥೆ ಮತ್ತು ಹೆರಿಗೆ ನಂತರ ಕೂಡ ಕಬ್ಬಿಣ ಅಂಶದ ಮಾತ್ರೆ ೬ ತಿಂಗಳು ತೆಗೆದುಕೊಳ್ಳಬೇಕು. ತಾಯ್ತನದ ಸಂದರ್ಭದಲ್ಲಿ ಹೆಚ್ಚು ಜಾಗೃತಿ ವಹಿಸಬೇಕಿದೆ. ಆರೋಗ್ಯ ಕಾರ್ಯಕರ್ತರ ಸಲಹೆ ಪಡೆದು, ಹೆರಿಗೆ ಸಂದರ್ಭ ಸ್ಥಳೀಯವಾಗಿ ದೊರೆಯುವ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಬೇಕು ಎಂದು ಹೇಳಿದರು.

ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಕೆ.ಆರ್. ರಾಜೇಶ್ ಮಾತನಾಡಿದರು.

ನಾಗರಹೊಳೆ ಉದ್ಯಾನವನಕ್ಕೆ ಒಳಪಡುವ ಬೊಮ್ಮಾಡು, ದೇವಮಚ್ಚಿ, ಕೋಟೆಮಚ್ಚಿ, ತಟ್ಟಳ್ಳಿ, ದಿಡ್ಡಳ್ಳಿ, ಮಜ್ಜಿಗೆಹಳ್ಳ, ಗದ್ದೆಹಾಡಿ, ಪಾಲದಾಳ, ಕಾರ್ಮಾಡು, ಕೋತೂರು, ಬೆಕ್ಕೆಸೊಡ್ಲೂರು, ಭದ್ರಗೋಳ, ಬಿಳೂರು, ಚೆನ್ನಂಗೊಲ್ಲಿ, ಬಸವೇಶ್ವರ ಕಾಲೋನಿ, ಕಾವೇರಿ ಕಾಲೋನಿಯ ಸುಮಾರು ೩೫ ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು. ಹಣೆಗೆ ಕುಂಕುಮ, ಕೈಬಳೆ ತೊಟ್ಟು, ಪೌಷ್ಟಿಕ ಆಹಾರ, ಕಾಳು ವಿತರಿಸಲಾಯಿತು.

ಕಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಶ್ಮಿ, ಉಪಾಧ್ಯಕ್ಷ ಸಚಿನ್ ಸೋಮಣ್ಣ, ವಿವೇಕಾನಂದ ಯೂತ್ ಮೂವ್‌ಮೆಂಟ್ ಸಮುದಾಯ ಆಧಾರಿತ ಆರೋಗ್ಯ ಕಾರ್ಯಕ್ರಮಗಳ ಮುಖ್ಯಸ್ಥ ಡಾ. ಡೆನ್ನಿಸ್ ಡಿ. ಚೌಹಾಣ್ ಇದ್ದರು.