ಅಪೇಕ್ಷಾ ದೇಚಮ್ಮ ಪ್ರಥಮ

ಪೊನ್ನಂಪೇಟೆ, ಸೆ. ೯: ಯುವ ನಾಯಕರ ಮತ್ತು ಉದ್ಯಮಶೀಲರ ವಿಶ್ವವ್ಯಾಪ್ತಿ ಒಕ್ಕೂಟದ ಭಾಗವಾಗಿರುವ ಜೆಸಿಐ ಭಾರತದ ವತಿಯಿಂದ ಕಳೆದ ಆಗಸ್ಟ್ ೮ರಂದು ದೇಶದಾದ್ಯಂತ ಏಕಕಾಲಕ್ಕೆ ನಡೆದ ಜೆಸಿಐ ಭಾರತ ರಾಷ್ಟçಮಟ್ಟದ ಪ್ರತಿಭಾನ್ವೇಷಣೆ ಪರೀಕ್ಷೆ -೨೦೨೧ರ ಫಲಿತಾಂಶದಲ್ಲಿ ಕೊಡಗಿನ ಅಪೇಕ್ಷಾ ದೇಚಮ್ಮ ಜೇಸಿಸ್ ವಲಯ ೧೪ರಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಸಾಧನೆಗೈದಿದ್ದಾಳೆ.

ವಲಯ ೧೪ರಲ್ಲಿರುವ ಜೆಸಿಐ ಪೊನ್ನಂಪೇಟೆ ನಿಸರ್ಗ (ನಿಸರ್ಗ ಜೇಸಿಸ್) ಘಟಕದ ಮೂಲಕ ಕಳೆದ ತಿಂಗಳ ೮ರಂದು ಆನ್‌ಲೈನ್ ಮೂಲಕ ಪರೀಕ್ಷೆ ಬರೆದ ಗೋಣಿಕೊಪ್ಪಲು ಬಳಿಯ ಕಳತ್ತುಮಾಡಿನ ಲಯನ್ಸ್ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಅಪೇಕ್ಷಾ ದೇಚಮ್ಮ ವಲಯದಲ್ಲಿ ಪರೀಕ್ಷೆ ಎದುರಿಸಿದ ಒಟ್ಟು ೧೦೫೦೭ ವಿದ್ಯಾರ್ಥಿಗಳ ಪೈಕಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಗಮನಸೆಳೆದಿದ್ದಾಳೆ. ಜೊತೆಗೆ ಈ ಸಾಧಕ ವಿದ್ಯಾರ್ಥಿ ಆಕರ್ಷಕ ಪಾರಿತೋಷಕ ಸೇರಿದಂತೆ ರೂ ೫ ಸಾವಿರ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾಳೆ.

ಜೆಸಿಐ ಭಾರತವು ಪ್ರತಿವರ್ಷ ೯ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗಾಗಿ ಈ ರಾಷ್ಟçಮಟ್ಟದ ಪ್ರತಿಭಾನ್ವೇಷಣಾ ಪರೀಕ್ಷೆಯನ್ನು ಆಯೋಜಿಸುತ್ತಿದೆ. ೨೦೧೧ರಲ್ಲೂ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಈ ಪರೀಕ್ಷೆ ಬರೆದಿದ್ದ ಕಾಪ್ಸ್ ವಿದ್ಯಾರ್ಥಿ ವಲಯದಲ್ಲೇ ಪ್ರಥಮ ಸ್ಥಾನ ದೊರೆತಿತ್ತು.

ಅಪೇಕ್ಷಾ ದೇಚಮ್ಮ ಗೋಣಿಕೊಪ್ಪಲು ಸಮೀಪದ ಕೈಕೇರಿ ನಿವಾಸಿ ವಿ.ಎಂ. ಲವ ಮತ್ತು ವಿನು ದಂಪತಿಗಳ ಪುತ್ರಿ.