ಮಡಿಕೇರಿ, ಸೆ. ೯: ಸಾರ್ವಜನಿಕ ರಸ್ತೆಯಲ್ಲಿ ವಾಹನವನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ, ಇತರ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದ ವ್ಯಕ್ತಿಗೆ ಬುದ್ಧಿವಾದ ಹೇಳಲು ಮುಂದಾದ ಪೊಲೀಸ್ ಸಿಬ್ಬಂದಿಗಳ ಮೇಲೆಯೇ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆ ಸೋಮವಾರಪೇಟೆ ಸಮೀಪದ ಹಣಕೋಡು ಗ್ರಾಮದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಸೋಮವಾರಪೇಟೆ ಪಟ್ಟಣ ಖಾಸಗಿ ಬಸ್ ನಿಲ್ದಾಣದ ಗಣಪತಿ ದೇವಾಲಯದ ಬಳಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದ ಹಣಕೋಡು ಗ್ರಾಮದ ಸುರೇಶ್ ಎಂಬವರ ಮೇಲೆ ಮೊಕದ್ದಮೆ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ರಾತ್ರಿ ೮ ಗಂಟೆ ಸುಮಾರಿಗೆ ತಮ್ಮ ಬ್ರೀಜಾ ಕಾರನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಗಲಾಟೆ ನಡೆಸುತ್ತಿದ್ದ ಸುರೇಶ್ ಅವರಿಗೆ ಬುದ್ದಿವಾದ ಹೇಳಿ, ವಾಹನವನ್ನು ತೆಗೆಯುವಂತೆ ಸೂಚಿಸಿದ ಪೊಲೀಸ್ ಪೇದೆ ಅನಂತ್‌ಕುಮಾರ್ ಅವರ ಸಮವಸ್ತç ಹರಿದು, ಹಲ್ಲೆ ನಡೆಸಿದ್ದಲ್ಲದೇ, ಠಾಣೆಗೆ ಕರೆತಂದ ಸಂದರ್ಭವೂ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ, ಸುರೇಶ್ ಅವರನ್ನು ಬಂಧಿಸಿದ ಠಾಣಾಧಿಕಾರಿ ಶ್ರೀಧರ್ ಅವರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.