ಮಡಿಕೇರಿ, ಸೆ. ೯: ರಾಜ್ಯದಲ್ಲಿನ ವಿವಿಧ ಭಾಷಾ ಅಕಾಡೆಮಿಗಳಿಗೆ ಅಧ್ಯಕ್ಷರು ಸೇರಿದಂತೆ ಇಂತಿಷ್ಟು ಸದಸ್ಯರು ಎಂಬ ನಿಯಮ ಜಾರಿಯಲ್ಲಿದೆ. ಆದರೆ ಪ್ರಸಕ್ತ ಅಧಿಕಾರದಲ್ಲಿರುವ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಸರಕಾರ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪೂರ್ಣ ಪ್ರಮಾಣದ ನಿಗದಿತ ಸದಸ್ಯರನ್ನೇ ನೇಮಕ ಮಾಡದಿರುವುದು, ಈ ಬಾರಿಯ ಆಡಳಿತ ಮಂಡಳಿಯಲ್ಲಿ ಗಮನಿಸಬಹುದಾಗಿದೆ.

ಅಕಾಡೆಮಿಗಳಿಗೆ ಅಧ್ಯಕ್ಷರು ಸೇರಿದಂತೆ ಒಟ್ಟು ೧೦ ಮಂದಿ ಸದಸ್ಯರನ್ನು ಸರಕಾರದ ಮೂಲಕ ಘೋಷಣೆ ಮಾಡಿ ನೇಮಕ ಮಾಡಲಾಗುತ್ತದೆ. ಇನ್ನು ಮೂವರು ಸದಸ್ಯರನ್ನು ಹಾಲಿ ಆಡಳಿತ ಮಂಡಳಿ ನಾಮನಿರ್ದೇಶನದ (ಕೋ ಅಪ್ಟ್) ಮೂಲಕ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಹಾಲಿ ಕೊಡವ ಅಕಾಡೆಮಿಯಲ್ಲಿ ಪ್ರಸ್ತುತ ಇರುವ ಸದಸ್ಯರ ಸಂಖ್ಯೆ ಸರಕಾರದ ಮೂಲಕ ಘೋಷಣೆಯಾದಂತೆ ಕೇವಲ ಏಳು ಮಾತ್ರ. ಮೂವರು ಸದಸ್ಯರನ್ನು ಈಗಿನ ಆಡಳಿತ ಮಂಡಳಿ ನಾಮನಿರ್ದೇಶನ ಮಾಡಿಕೊಂಡಿರುವುದು ಹೊರತುಪಡಿಸಿದರೆ, ಸರಕಾರದ ಮುಖಾಂತರವೇ ಘೋಷಣೆಯಾಗಿದ್ದ ಮೂವರು ಸದಸ್ಯರ ಸ್ಥಾನ ಇನ್ನೂ ಖಾಲಿಯಾಗಿಯೇ ಉಳಿದಿದೆ.

ಎರಡು ವರ್ಷದತ್ತ : ಅಕಾಡೆಮಿಗಳ ಅಧಿಕಾರಾವಧಿ ಒಟ್ಟು ಮೂರು ವರ್ಷಗಳ ಅವಧಿಯದ್ದಾಗಿದೆ. ೨೦೧೯ರ ಅಕ್ಟೋಬರ್‌ನಲ್ಲಿ ಕೊಡವ ಅಕಾಡೆಮಿ ಡಾ|| ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ರಚನೆಗೊಂಡಿದೆ. ಆ ಸಂದರ್ಭದಲ್ಲಿ ಸರಕಾರ ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಾಪಂಡ ಎಸ್. ರವಿಕಾಳಪ್ಪ, ಮಾಣಿಗೆರ ಎಸ್. ಶಂಭಯ್ಯ, ಬಾಚಮ್ಮಂಡ ಗೌರಮ್ಮ ಮಾದಮಯ್ಯ, ಬಬ್ಬೀರ ಸರಸ್ವತಿ, ಡಾ|| ಮೇಚಿರ ಸುಭಾಷ್ ನಾಣಯ್ಯ, ಪರಿಞÁರಂಡ ಪ್ರಭುಕುಮಾರ್ ಹಾಗೂ ಮಾಚಿಮಾಡ ಜಾನಕಿ ಮಾಚಯ್ಯ (ಒಟ್ಟು ೭ ಮಂದಿ) ಇವರುಗಳನ್ನು ಸದಸ್ಯರುಗಳನ್ನಾಗಿ ಆಯ್ಕೆ ಮಾಡಿತ್ತು. ಇನ್ನು ಮೂವರು ಸದಸ್ಯರನ್ನು ಸರಕಾರವೇ ಪ್ರಕಟಿಸಬೇಕಾಗಿತ್ತಾದರೂ ಆರಂಭದಲ್ಲಿ ಇದು ನಡೆದಿರಲಿಲ್ಲ. ಬಳಿಕ ಈಗಿನ ಆಡಳಿತ ಮಂಡಳಿ, ತೇಲಪಂಡ ಕವನ್ ಕಾರ್ಯಪ್ಪ, ಡಾ|| ಮುಲ್ಲೇಂಗಡ ರೇವತಿ ಪೂವಯ್ಯ ಹಾಗೂ ಕುಡಿಯರ ಮುತ್ತಪ್ಪ ಅವರುಗಳನ್ನು ನಾಮನಿರ್ದೇಶನ ಮಾಡಿಕೊಂಡಿತ್ತು.

ಇನ್ನು ಒಂದೇ ವರ್ಷ

ಈ ಪ್ರಕ್ರಿಯೆಗಳ ಬಳಿಕ ಅಕಾಡೆಮಿಯ ಮೂಲಕ ಹಲವರ ಹೆಸರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸೂಚನೆಯಂತೆ ಶಿಫಾರಸ್ಸು ಮಾಡಿ ಕಳುಹಿಸಿಕೊಡಲಾಗಿತ್ತು. ಆದರೆ ಈ ತನಕವೂ ಈ ನೇಮಕಾತಿಯತ್ತ ಸರಕಾರ ಅಥವಾ ಇಲಾಖೆ ಗಮನ ಹರಿಸಿಲ್ಲ. ಕೊಡವ ಅಕಾಡೆಮಿಯಂತೆ ಬ್ಯಾರಿ ಅಕಾಡೆಮಿಗೂ ಪೂರ್ಣ ಸದಸ್ಯರ ನೇಮಕವಾಗಿಲ್ಲ. ಆರಂಭದಲ್ಲಿ ಅರೆಭಾಷಾ ಅಕಾಡೆಮಿಗೆ ಕೂಡಾ ಪೂರ್ಣ ಪ್ರಮಾಣದ ಸದಸ್ಯರ ನೇಮಕಾತಿಯಾಗಿರಲಿಲ್ಲವಾದರೂ ನಂತರದಲ್ಲಿ ಉಳಿಕೆಯಿದ್ದ ಸದಸ್ಯ ಸ್ಥಾನವನ್ನು ಭರ್ತಿ ಮಾಡಲಾಗಿತ್ತು. ಇದೀಗ ಅಕಾಡೆಮಿ ಅಧಿಕಾರಕ್ಕೆ ಬಂದು ಮುಂದಿನ ಅಕ್ಟೋಬರ್‌ಗೆ ಎರಡು ವರ್ಷ ಪೂರ್ಣಗೊಳ್ಳಲಿದೆ. ಇನ್ನು ಉಳಿಯುವದು ಕೇವಲ ಒಂದು ವರ್ಷದ ಸಮಯ ಮಾತ್ರವಾಗಿದೆ.

ಇರುವ ಸದಸ್ಯರಿಂದಲೇ ಕೆಲಸ

ಪ್ರಸ್ತುತ ಅಕಾಡೆಮಿಯ ಕಾರ್ಯಚಟುವಟಿಕೆಗಳು ಹಾಲಿ ಇರುವ ಸದಸ್ಯರುಗಳ ಸಹಕಾರದಿಂದಲೇ ನಡೆದುಕೊಂಡು ಬರುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳೂ ಈ ಬಗ್ಗೆ ಮೌನ ವಹಿಸಿದ್ದಾರೆ. ಈ ನಡುವೆ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರುಗಳಾಗಿ ಈಗಿನ ಸರಕಾರದಲ್ಲಿ ಈ ಹಿಂದೆ ಸಿ.ಟಿ. ರವಿ, ನಂತರದಲ್ಲಿ ಅರವಿಂದ ಲಿಂಬಾವಳಿ ಅವರು ಕಾರ್ಯನಿರ್ವಹಿಸಿದ್ದು, ಇದೀಗ ಬದಲಾವಣೆಯಾಗಿದೆ. ಪ್ರಸ್ತುತ ಕಾರ್ಕಳದ ಸುನಿಲ್‌ಕುಮಾರ್ ಅವರು ಈ ಇಲಾಖೆಯ ಸಚಿವರಾಗಿದ್ದಾರೆ.

ಸತತ ಅತಿವೃಷ್ಟಿ, ಕೊರೊನಾದಂತಹ ಸಮಸ್ಯೆಗಳ ನಡುವೆ ಅಕಾಡೆಮಿಗಳ ಚಟುವಟಿಕೆಗೆ ಕೆಲವೊಂದು ಅಡೆ - ತಡೆಗಳು ಎದುರಾಗಿದ್ದರೂ ಇರುವ ಮಂದಿಯೇ ಇದನ್ನು ನಿಭಾಯಿಸುತ್ತಿದ್ದಾರೆ. ಇನ್ನು ಒಂದು ವರ್ಷದ ಅವಧಿಗೆ ನೇಮಕಾತಿ ಮಾಡಿದರೂ ಅಷ್ಟಕಷ್ಟೇ ಎಂಬದು ಜನರ ಅಭಿಪ್ರಾಯ.

- ಶಶಿ ಸೋಮಯ್ಯ