ಕಣಿವೆ, ಸೆ. ೮: ಕೂಡುಮಂಗಳೂರು ಗ್ರಾ.ಪಂ ನ ಕೂಡ್ಲೂರಿನ ನವಗ್ರಾಮದಲ್ಲಿ ಮತ್ತೊಂದು ಮನೆಯ ಮೇಲೆ ಬಂಡೆ ಉರುಳಿ ಬಿದ್ದ ಪರಿಣಾಮ ಮನೆಗೋಡೆಗೆ ಹಾನಿಯಾಗಿದೆ.

ನವಗ್ರಾಮದ ವೀರಭದ್ರ ಮತ್ತು ಸವಿತಾ ದಂಪತಿಗಳ ಮನೆಗೆ ಬಂಡೆ ಉರುಳಿಬಿದ್ದ ಪರಿಣಾಮ ಗೋಡೆಗೆ ಹಾನಿಯುಂಟಾಗಿದೆ. ಮಂಗಳವಾರ ರಾತ್ರಿವೇಳೆ ಬಂಡೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಮನೆಮಂದಿಗೆ ಯಾವುದೇ ಹಾನಿ ಸಂಭವಿಸಿಲ್ಲ. ರಾತ್ರಿ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಸಮಯ ಮನೆಯವರು ಮುಂಭಾಗದಲ್ಲಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ವಾರ್ಡ್ ಸದಸ್ಯ ಕೆ.ಬಿ.ಷಂಶುದ್ಧೀನ್ ಭೇಟಿ ನೀಡಿ ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು. ಗ್ರಾಮ ಲೆಕ್ಕಿಗ ಗುರುದರ್ಶನ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಕಂದಾಯ ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸಿಕೊಡುವ ಬಗ್ಗೆ ಭರವಸೆ ನೀಡಿದರು.

ಕೂಡುಮಂಗಳೂರು ಗ್ರಾ.ಪಂ. ಸದಸ್ಯ ಷÀಂಶುದ್ಧೀನ್ ಮಾತನಾಡಿ, ನವಗ್ರಾಮದಲ್ಲಿ ಇಂತಹ ಘಟನೆಗಳು ಆಗಾಗ ನಡೆಯುತ್ತಲಿವೆ. ಬಂಡೆ ಬೀಳುವುದು, ಗುಡ್ಡ ಕುಸಿತ ಇಂತಹ ಸಮಸ್ಯೆಗಳಿಂದ ಸ್ಥಳೀಯರು ಜೀವಭಯದಿಂದ ಬದುಕುತ್ತಿದ್ದಾರೆ. ಅನಾಹುತ ಸಂಭವಿಸುವುದಕ್ಕೂ ಮುನ್ನ ಸರ್ಕಾರ ಇಲ್ಲಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಜನರ ಸುರಕ್ಷತಾ ದೃಷ್ಟಿಯಿಂದ ಸೂಕ್ತ ಪರಿಹಾರ ಒದಗಿಸಿಕೊಡುವತ್ತ ಮುಂದಾಗಬೇಕು ಎಂದು ಒತ್ತಾಯಿಸಿದರು.