ಕೂಡಿಗೆ, ಸೆ. ೮: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭಂವರ್ ಸಿಂಗ್ ವೀನಾ ಅವರು ಕುಶಾಲನಗರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಜಲ ಜೀವನ್ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿ ವೀಕ್ಷ್ಷಣೆ ಮತ್ತು ಪ್ರಗತಿಯ ಪರಿಶೀಲನೆ ನಡೆಸಿದರು.

ಮುಳ್ಳುಸೋಗೆ, ಕೂಡು ಮಂಗಳೂರು, ಕೂಡಿಗೆ, ಹೆಬ್ಬಾಲೆ, ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನಡೆಯುತ್ತಿರುವ ಜಲ ಜೀವನ್ ಯೋಜನೆಯ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಜಯಣ್ಣ, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಲುವರಾಜ್, ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗೀರತಿ, ಸದಸ್ಯರು, ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯಪಾಲಕ ಇಂಜಿನಿಯರ್ ವೀರೇಂದ್ರ ಕುಮಾರ್, ಶಿವಕುಮಾರ್ ಸೇರಿದಂತೆ ಕುಡಿಯುವ ನೀರು ಯೋಜನೆಯ ವಿವಿಧ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸುಮೇಶ್, ಸಂತೋಷ, ಅಯಿಷಾ, ರಾಕೇಶ್, ವೀಣಾ, ಹರೀಶ್, ಗ್ರಾಮಸ್ಥರು ಹಾಜರಿದ್ದರು.