ಕುಶಾಲನಗರ, ಸೆ. ೮: ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಏಕಗವಾಕ್ಷಿ ಕೇಂದ್ರಕ್ಕೆ ಸ್ಥಳೀಯ ಸಮಿತಿಗಳು ಸೇರಿದಂತೆ ಗ್ರಾಮಾಂತರ ವ್ಯಾಪ್ತಿಯಲ್ಲಿನ ಗಣಪತಿ ಸೇವಾ ಸಮಿತಿಗಳು ಗಣಪತಿ ಪ್ರತಿಷ್ಠಾಪನೆಗೆ ಅನುಮತಿಗೆ ಅರ್ಜಿ ಸಲ್ಲಿಸಲು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಪೊಲೀಸ್, ಅಗ್ನಿ ಶಾಮಕ ದಳ, ಚೆಸ್ಕಾಂ, ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಅಧಿಕಾರಿಗಳು ಹಾಜರಿದ್ದರೂ, ಕಂದಾಯ ಇಲಾಖೆಯ ಅಧಿಕಾರಿಗಳು ಆಗಮಿಸದ ಹಿನ್ನೆಲೆಯಲ್ಲಿ ಅರ್ಜಿದಾರರು ಮಧ್ಯಾಹ್ನದವರೆಗೆ ಕಾದು ಹೈರಾಣಾದ ದೃಶ್ಯ ಗೋಚರಿಸಿತು. ತೊರೆನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಳಿಲುಕೊಪ್ಪೆ ಚಾಮುಂಡಿ ಯುವಕ ಸಂಘ, ಅರಸಿನಕೊಪ್ಪದ ಗಣಪತಿ ಯುವಕ ಸಮಿತಿ, ಹೆಬ್ಬಾಲೆಯ ಯುವಕ ಸಮಿತಿ, ಸೀಗೆ ಹೊಸೂರುವಿನ ವಿದ್ಯಾಗಣಪತಿ ಸಮಿತಿಗಳು ಹತ್ತು ವರ್ಷಗಳಿಂದ ನಿರಂತರ ಉತ್ಸವ ಆಚರಿಸಿಕೊಂಡು ಬಂದಿದ್ದು , ಈ ಬಾರಿ ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸಿದ್ದರೂ ಅನುಮತಿಗೆ ಮಾತ್ರ ಪರದಾಡಬೇಕಾಗಿದೆ ಎನ್ನುವ ದೂರುಗಳು ಕೇಳಿಬಂದವು. ಈ ನಡುವೆ ಕುಶಾಲನಗರ ಪಟ್ಟಣದಲ್ಲಿ ೪ ಕಡೆ ಗಣಪತಿ ಪ್ರತಿಷ್ಠಾಪನೆಗೆ ತಯಾರಿ ನಡೆಯುತ್ತಿದೆ.