ದೇಶದಲ್ಲಿ ಶೇ.೫೮ ರಷ್ಟು ವಯಸ್ಕರಿಗೆ ಮೊದಲ ಡೋಸ್ ಲಸಿಕೆ
ನವದೆಹಲಿ, ಸೆ. ೯: ದೇಶಾದ್ಯಂತ ಸುಮಾರು ೭೧ ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ ಶೇ. ೫೮ ರಷ್ಟು ವಯಸ್ಕರು ಮೊದಲ ಡೋಸ್ ಲಸಿಕೆ ಪಡೆದಿದ್ದರೆ, ಶೇ. ೧೮ ರಷ್ಟು ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಕೋವಿಡ್ ಟಾಸ್ಕ್ಫೋರ್ಸ್ ಮುಖ್ಯಸ್ಥ ವಿ.ಕೆ. ಪೌಲ್, ಕೊರೊನಾ ವೈರಸ್ ಸಾಂಕ್ರಾಮಿಕ ಇನ್ನೂ ಮುಂದುವರೆದಿದೆ. ಎರಡನೇ ಅಲೆ ಇನ್ನೂ ಮುಗಿದಿಲ್ಲ ಎಂದರು. ಕೋವಿಡ್-೧೯ ಸೋಂಕಿನ ವಿರುದ್ಧ ಲಸಿಕೆ ಪ್ರಮುಖವಾದ ಶೀಲ್ಡ್ ಆಗಿದೆ. ಲಸಿಕೆಗಳು ಲಭ್ಯವಿದ್ದು, ಜನರು ಲಸಿಕೆ ಪಡೆಯುವಂತೆ ಮನವಿ ಮಾಡುತ್ತೇವೆ. ಮೊದಲ ಡೋಸ್ ಪಡೆದ ನಂತರವೇ ಎರಡನೇ ಡೋಸ್ ಪಡೆಯಿರಿ, ಇದು ಕೋವಿಡ್ನಿಂದ ಸಾವು ಸಂಭವಿಸದAತೆ ಭರವಸೆ ನೀಡುತ್ತದೆ ಎಂದು ಅವರು ಹೇಳಿದರು. ಸಂಪೂರ್ಣ ಲಸಿಕೆ ಪಡೆದವರಲ್ಲಿ ಸೋಂಕು ಕಾಣಿಸಿಕೊಂಡರೂ, ಸಾವಿನ ಹಂತದವರೆಗೂ ಹೋಗುವುದಿಲ್ಲ, ಆಸ್ಪತ್ರೆಗೆ ದಾಖಲಾಗುವುದು ತೀರಾ ಕಡಿಮೆಯಾಗಿರುತ್ತದೆ. ಕೋವಿಡ್-೧೯ ಲಸಿಕೆಯ ಮೊದಲ ಡೋಸ್ ಸಾವು ಪ್ರಕರಣಗಳನ್ನು ತಡೆಯುವಲ್ಲಿ ಶೇ. ೯೬.೬ ರಷ್ಟು ಪರಿಣಾಮಕಾರಿಯಾಗಿದ್ದರೆ ೨ನೇ ಡೋಸ್ ಶೇ. ೯೭.೫ ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಿದರು. ಏಪ್ರಿಲ್ ಮತ್ತು ಆಗಸ್ಟ್ ನಡುವೆ ಲಸಿಕೆ ತಡೆದಿರುವ ಸಾವು ಕುರಿತ ಮಾಹಿತಿಯನ್ನು ಉಲ್ಲೇಖಿಸಿದ ಅವರು, ಏಪ್ರಿಲ್ - ಮೇ ನಲ್ಲಿ ಎರಡನೇ ಅಲೆ ವೇಳೆಯಲ್ಲಿ ಲಸಿಕೆ ಪಡೆಯದವರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿರುವುದಾಗಿ ವರದಿಯಾಗಿರುವುದಾಗಿ ತಿಳಿಸಿದರು. ಉತ್ತರ ಪ್ರದೇಶದಲ್ಲಿ ಮಕ್ಕಳ ಸಾವಿಗೆ ಡೆಂಘೀ ಜ್ವರ ಕಾರಣ ಎಂದು ಡಾ. ಪೌಲ್ ಹೇಳಿದರು. ದೇಶದಲ್ಲಿ ಇಂದು ೪೩,೨೬೩ ಹೊಸ ಕೊರೊನಾ ಪ್ರಕರಣ ಹಾಗೂ ೩೩೮ ಸಾವು ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕ ಕಾಣಿಸಿಕೊಂಡಾಗಿನಿAದಲೂ ಈವರೆಗೂ ಒಟ್ಟಾರೆ ೪,೪೧,೭೪೯ ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ದೇಶದ ೩೫ ಜಿಲ್ಲೆಗಳಲ್ಲಿ ಈಗಲೂ ಸಾಪ್ತಾಹಿಕ ಶೇ. ೧೦ ರಷ್ಟು ಕೋವಿಡ್ ಪಾಸಿಟಿವಿಟಿ ದರವಿದ್ದರೆ, ೩೦ ಜಿಲ್ಲೆಗಳಲ್ಲಿ ಇದು ಶೇ. ೫ ರಿಂದ ೧೦ ರಷ್ಟಿದೆ. ಸಿಕ್ಕಿಂ, ದಾದ್ರಾ ಮತ್ತು ನಾಗರ್ ಹವೇಲಿ, ಹಿಮಾಚಲ ಪ್ರದೇಶದಲ್ಲಿ ೧೮ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರು ಕನಿಷ್ಟ ಒಂದು ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಮಕ್ಕಳಿಗೆ ಲಸಿಕೆ ಬಗ್ಗೆ ಯಾವುದೇ ವೈಜ್ಞಾನಿಕ ಸಂಸ್ಥೆಗಳು ಅಥವಾ ಪುರಾವೆಗಳು ಸಲಹೆ ನೀಡಿಲ್ಲ, ಆದಾಗ್ಯೂ, ಶಿಕ್ಷಕರು, ಶಾಲಾ ಸಿಬ್ಬಂದಿ ಮತ್ತು ಪೋಷಕರು ಲಸಿಕೆ ಪಡೆಯಬಹುದು ಎಂದು ಅವರು ತಿಳಿಸಿದರು.
ಕರ್ನಾಟಕ ಸೇರಿ ೧೭ ರಾಜ್ಯಗಳಿಗೆ ರೂ. ೯,೮೭೧ ಕೋಟಿ ಅನುದಾನ ಬಿಡುಗಡೆ
ನವದೆಹಲಿ, ಸೆ. ೯: ಕರ್ನಾಟಕ ಸೇರಿದಂತೆ ೧೭ ರಾಜ್ಯಗಳಿಗೆ ೯,೮೭೧ ಕೋಟಿ ರೂಪಾಯಿಗಳ ನಂತರದ ವಿತರಣಾ ಆದಾಯ ಕೊರತೆಯ (ಪಿಡಿಆರ್ಡಿ) ಅನುದಾನದ ಆರನೇ ಮಾಸಿಕ ಕಂತನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಕಂತಿನ ಬಿಡುಗಡೆಯೊಂದಿಗೆ, ಪ್ರಸ್ತುತ ಹಣಕಾಸು ವರ್ಷದಲ್ಲಿ ಪಿಡಿಆರ್ಡಿ ಅನುದಾನವಾಗಿ ಅರ್ಹ ರಾಜ್ಯಗಳಿಗೆ ಒಟ್ಟು ೫೯,೨೨೬ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಸಂವಿಧಾನದ ಪರಿಚ್ಛೇದ ೨೭೫ರ ಅಡಿಯಲ್ಲಿ ರಾಜ್ಯಗಳಿಗೆ ಈ ಅನುದಾನವನ್ನು ಒದಗಿಸಲಾಗಿದೆ. ೨೦೨೧-೨೨ರ ಅವಧಿಯಲ್ಲಿ ೧೭ ರಾಜ್ಯಗಳ ಕಂದಾಯ ಖಾತೆಗಳಲ್ಲಿನ ಅಂತರವನ್ನು ಪೂರೈಸಲು ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನಂತೆ ಮಾಸಿಕ ಕಂತುಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಈ ಅನುದಾನವನ್ನು ಪಡೆಯಲು ರಾಜ್ಯಗಳ ಅರ್ಹತೆ ಮತ್ತು ಅನುದಾನದ ಪ್ರಮಾಣವನ್ನು ಆಯೋಗವು ೨೦೨೧-೨೨ರ ಆರ್ಥಿಕ ವರ್ಷದ ಮೌಲ್ಯಮಾಪನ ಮಾಡಿದ ನಂತರ ರಾಜ್ಯಗಳ ಆದಾಯ ಮತ್ತು ವೆಚ್ಚದ ಮೌಲ್ಯಮಾಪನದ ನಡುವಿನ ಅಂತರವನ್ನು ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಹದಿನೈದನೆಯ ಹಣಕಾಸು ಆಯೋಗವು ೨೦೨೧-೨೨ ರ ಆರ್ಥಿಕ ವರ್ಷದಲ್ಲಿ ೧೭ ರಾಜ್ಯಗಳಿಗೆ ಒಟ್ಟು ೧,೧೮,೪೫೨ ಕೋಟಿ ರೂಪಾಯಿಗಳ ನಂತರದ ಹಂಚಿಕೆ ಕಂದಾಯ ಕೊರತೆಯ ಅನುದಾನವನ್ನು ಶಿಫಾರಸು ಮಾಡಿದೆ. ಈ ಪೈಕಿ ರೂ. ೫೯,೨೨೬ ಕೋಟಿ (ಶೇ.೫೦) ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಹದಿನೈದನೆಯ ಹಣಕಾಸು ಆಯೋಗವು ಪಿಡಿಆರ್ಡಿ ಅನುದಾನಕ್ಕೆ ಶಿಫಾರಸು ಮಾಡಿದ ರಾಜ್ಯಗಳಲ್ಲಿ ಆಂಧ್ರಪ್ರದೇಶ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ಪಶ್ಚಿಮ ಬಂಗಾಳ ಮತ್ತು ಮೇಘಾಲಯ ಸೇರಿವೆ.
ವಿಧಾನಸಭೆ ಕಾರ್ಯಕಲಾಪ ಚಿತ್ರೀಕರಿಸಿ ನೇರ ಪ್ರಸಾರ
ಬೆಂಗಳೂರು, ಸೆ. ೯: ಕರ್ನಾಟಕ ವಿಧಾನಸಭೆಯ ಅಧಿವೇಶನ ಸೆಪ್ಟೆಂಬರ್ ೧೩ ರಿಂದ ಪ್ರಾರಂಭವಾಗಲಿದ್ದು, ಅಧಿವೇಶನದ ಕಾರ್ಯಕಲಾಪಗಳನ್ನು ಲೋಕಸಭೆಯ ಮಾದರಿಯಲ್ಲಿ ಚಿತ್ರೀಕರಿಸಿ ನೇರಪ್ರಸಾರ ಮಾಡಲು ಹಾಗೂ ಚಿತ್ರೀಕರಿಸಿದ ದೃಶ್ಯಗಳನ್ನು ಇತರ ಖಾಸಗಿ ಚಾನೆಲ್ಗಳಿಗೆ ಸ್ಯಾಟಿಲೈಟ್ ಮೂಲಕ ಸಂಪರ್ಕವನ್ನು ಒದಗಿಸುವ ಕಾರ್ಯವನ್ನು ಬೆಂಗಳೂರು ದೂರದರ್ಶನ ಕೇಂದ್ರಕ್ಕೆ ಹಾಗೂ ಅದೇ ರೀತಿ ಸದನದ ಕಾರ್ಯಕಲಾಪಗಳ ಛಾಯಾಚಿತ್ರಗಳನ್ನು ತೆಗೆದು ಮುದ್ರಣ ಮಾಧ್ಯಮದವರಿಗೆ ಒದಗಿಸುವ ಕಾರ್ಯವನ್ನು ವಾರ್ತಾ ಇಲಾಖೆಯವರಿಗೆ ವಹಿಸಲಾಗಿದೆ. ಬೆಂಗಳೂರು ದೂರದರ್ಶನ ಕೇಂದ್ರದವರು ಚಿತ್ರೀಕರಿಸಿದ ವಿಧಾನಸಭೆಯ ಕಾರ್ಯಕಲಾಪಗಳ ಔಟ್ಪುಟ್ ಅನ್ನು ಖಾಸಗಿ ಸುದ್ದಿವಾಹಿನಿಯವರು ಈ ಲಿಂಕ್ ಅಡಿಯಲ್ಲಿ ಪಡೆಯಬಹುದಾಗಿದೆ. ಖಾಸಗಿ ಸುದ್ದಿ ವಾಹಿನಿಗಳು ಲಿಂಕ್ ಸಂಪರ್ಕವನ್ನು ಪಡೆಯುವ ಪ್ರಕ್ರಿಯೆ ಕುರಿತು ಹಾಗೂ ಇದಕ್ಕೆ ಸಂಬAಧಿಸಿದAತೆ ಯಾವುದೇ ಸಹಾಯ/ಸಹಕಾರದ ಅವಶ್ಯವಿದ್ದಲ್ಲಿ ಬೆಂಗಳೂರು, ದೂರದರ್ಶನ ಕೇಂದ್ರದ ನಿರ್ದೇಶಕರು (ಇಂಜಿನಿಯರಿAಗ್), ಆರ್. ವೆಂಕಟೇಶ್ ಮೊಬೈಲ್ ಸಂಖ್ಯೆ: ೯೪೪೪೩೨೯೫೬೫ ಹಾಗೂ ಸಹಾಯಕ ನಿರ್ದೇಶಕರು (ಇಂಜಿನಿಯರಿAಗ್), ಎ.ವಿ.ಎಸ್. ಸೆಲ್ವರಾಜ್, ಮೊಬೈಲ್ ಸಂಖ್ಯೆ: ೯೮೮೬೦೭೮೯೨೫ ಇವರನ್ನು ಸಂಪರ್ಕಿಸಬಹುದಾಗಿದೆ. ಸದನದ ಕಾರ್ಯಕಲಾಪಗಳನ್ನು ವರದಿ ಮಾಡುವ ವರದಿಗಾರರಿಗೆ ಮಾತ್ರ ಈ ಬಾರಿಯೂ ಸಹ ಸಭಾಂಗಣದ ಎರಡನೇ ಮಹಡಿಯಲ್ಲಿರುವ ಪತ್ರಕರ್ತರ ಗ್ಯಾಲರಿಗೆ ಪ್ರವೇಶಿಸಲು ಅವಕಾಶವಿರುತ್ತದೆ. ಆದರೆ, ಖಾಸಗಿ ಸುದ್ದಿವಾಹಿನಿಗಳ ಕ್ಯಾಮೆರಾಮೆನ್ ಹಾಗೂ ಮುದ್ರಣ ಮಾಧ್ಯಮದ ಛಾಯಾಗ್ರಾಹಕರಿಗೆ ವಿಧಾನಸಭೆಯ ಸಭಾಂಗಣದೊಳಗೆ /ಎರಡನೇ ಮಹಡಿಯ ಪತ್ರಕರ್ತರ ಗ್ಯಾಲರಿಗೆ ಪ್ರವೇಶಾವಕಾಶ ಇರುವುದಿಲ್ಲ. ವರದಿಗಾರರು ಸದನದ ಒಳಗೆ ಮೊಬೈಲ್, ಟ್ಯಾಬ್ ಇತ್ಯಾದಿಗಳನ್ನು ಕೊಂಡೊಯ್ಯಬಾರದು. ಎಲ್ಲಾ ಮುದ್ರಣ ಮಾಧ್ಯಮದವರು ಮತ್ತು ಸುದ್ದಿವಾಹಿನಿಯವರು ಸಹಕರಿಸಬೇಕೆಂದು ಕರ್ನಾಟಕ ವಿಧಾನಸಭೆ ಸಚಿವಾಲಯದ ನಿರ್ದೇಶಕರು (ಐಟಿ) ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.