ಮಡಿಕೇರಿ, ಸೆ. ೯ : ಅಕ್ರಮವಾಗಿ ರಾಜ್ಯ ಹೆದ್ದಾರಿಯಲ್ಲಿ ಲಾರಿಯೊಂದರಲ್ಲಿ ಬೀಟಿ ಮರ ಸಾಗಾಟ ಮಾಡುತ್ತಿದ್ದ ಪ್ರಕರಣ ವೊಂದನ್ನು ಮಡಿಕೇರಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ. ಮಡಿಕೇರಿ ಸನಿಹದ ಕಾಟಕೇರಿ ಜಂಕ್ಷನ್ ಬಳಿ ಈ ಘಟನೆ ನಡೆದಿದ್ದು ರೂ. ೪ ಲಕ್ಷ ಮೌಲ್ಯದ ಬೀಟಿ ಮರದ ದಿಮ್ಮಿಗಳು ಸೇರಿದಂತೆ ಟಾಟಾ ಎನ್.ಪಿ. ಲಾರಿಯೊಂದನ್ನು ವಶಪಡಿಸಿ ಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ರೂ. ೯.೫೦ ಲಕ್ಷ ಎಂದು ಅಂದಾಜಿಸಲಾಗಿದೆ.

ಮAಗಳೂರು ರಾಜ್ಯ ಹೆದ್ದಾರಿಯಲ್ಲಿ ಇಂದು ಈ ಕಾರ್ಯಾಚರಣೆ ನಡೆಸಲಾಗಿದೆ. ಲಾರಿ (ಕೆಎ೦೬ ಸಿ೬೨೩೦) ಯಲ್ಲಿ ಮರ ಸಾಗಾಟ ಮಾಹಿತಿ ಪಡೆದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ ಸಂದರ್ಭ ಚಾಲಕ ಲಾರಿಯನ್ನು ಬಿಟ್ಟು ಪಲಾಯನ ಗೈದಿದ್ದಾನೆ. ಮರ ಹಾಗೂ ಲಾರಿ ಯನ್ನು ವಶಪಡಿಸಿ ಕೊಂಡಿರುವ ಸಿಬ್ಬಂದಿಗಳು ಕರ್ನಾಟಕ ಅರಣ್ಯ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸ್ ಅರಣ್ಯ ಸಂಚಾರಿದಳದ ಅಧೀಕ್ಷಕ ಸುರೇಶ್ ಬಾಬು ಮಾರ್ಗದರ್ಶನಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿ.ಎಸ್.ಐ. ಸಿ.ಯು. ಸವಿ, ಸಿಬ್ಬಂದಿಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್ ಹಾಗೂ ಚಾಲಕ ಮೋಹನ್ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಗಳ ಬಂಧನಕ್ಕೆ ತನಿಖೆ ಮುಂದುವರಿದಿದೆ.