ಕೂಡಿಗೆ, ಸೆ. ೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದು ಗೂರು ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳಿಂದಲೂ ನಿವೇಶನ ರಹಿತರಿಗೆ ನಿವೇಶನವನ್ನು ನೀಡಲು ಸ್ಥಳ ಕಾಯ್ದಿರಿಸಲಾಗಿದೆ. ಆದರೆ ಆ ಜಾಗವು ಈಗಾಗಲೇ ಅರಣ್ಯ ಇಲಾಖೆಯ ಜಾಗವಾಗಿದ್ದು, ಆ ಜಾಗದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಕೂಡಿಗೆ ಗ್ರಾಮ ಪಂಚಾಯಿತಿಯಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ಪಟ್ಟಿ ತಯಾರಿಸಲಾಗುತ್ತಿದೆ. ಆದರೆ ಹುದುಗೂರು ಗ್ರಾಮದಲ್ಲಿ ಕಾಯ್ದಿರಿಸಿದ ಜಾಗ ಮಾತ್ರ ಅರಣ್ಯ ಇಲಾಖೆಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ.

ಈಗಾಗಲೇ ನಿವೇಶನ ರಹಿತರಿಗೆ ನಿವೇಶನ ನೀಡಲು ಕಾಯ್ದಿರಿಸಿದ ಜಾಗವು ೮/೧೯ರಲ್ಲಿ ಎರಡು ಎಕರೆ ಮತ್ತು ೮/೨೦ ರಲ್ಲಿ ೩೦ ಸೆಂಟು ಜಾಗ ಅರಣ್ಯ ಇಲಾಖೆಯ ಹೆಸರಿನಲ್ಲಿ ಆರ್‌ಟಿಸಿ ಇದೆ. ಆದರೆ ತಾಲೂಕು ಮುಖ್ಯ ಕಾರ್ಯನಿರ್ವಾಹಣಾ ಧಿಕಾರಿಯವರ ಹೆಸರಿನಲ್ಲಿ ಇರುವ ಜಾಗ ಸರ್ವೆ ನಂಬರ್ ೮/೩ರ ೪ ಎಕರೆ ಜಾಗವು ಹುದುಗೂರು ಗ್ರಾಮದ ಬುಡಕಟ್ಟು ಕುಟುಂಬದವರು ಭತ್ತದ ಕೃಷಿ ಮಾಡಿದ ಜಮೀನಾಗಿದೆ.

ಈ ಸರ್ವೆ ನಂಬರ್ ಜಮೀನಿನಲ್ಲಿ ಕಳೆದ ೩೦ ವರ್ಷಗಳಿಂದಲೂ ಬೇಸಾಯ ಮಾಡುತ್ತಾ ಬಂದಿರುತ್ತಾರೆ. ಆದರೆ ನಿವೇಶನಗಳನ್ನು ನೀಡಲು ಹೊರಟಿರುವ ತಾಲೂಕು ಮಟ್ಟದ ಅಧಿಕಾರಿಗಳು ಜಾಗವನ್ನು ಸಮರ್ಪಕವಾಗಿ ಪರಿಶೀಲನೆ ಮಾಡದೆ, ಯಾರ ಹೆಸರಿನಲ್ಲಿ ದಾಖಲೆಗಳು ಇವೆ ಎಂಬುದನ್ನು ಪರಿಶೀಲನೆ ನಡೆಸಿ, ನಂತರ ಹಂಚಿಕೆ ಮಾಡುವಂತೆ ಸ್ಥಳೀಯ ಗ್ರಾಮಸ್ಥರ ಆಗ್ರಹವಾಗಿದೆ.

ಹುದುಗೂರು ಗ್ರಾಮದಲ್ಲಿ ಕಾಯ್ದಿರಿಸಿದ ಜಾಗ ಸೋಮವಾರ ಪೇಟೆ - ಕೂಡಿಗೆ ಮುಖ್ಯ ರಸ್ತೆಯ ಬದಿಯಲ್ಲಿದೆ.

ಈ ವ್ಯಾಪ್ತಿಯ ಜಾಗವು ರಸ್ತೆಯ ಒಳಭಾಗದಿಂದ ಹಾರಂಗಿಯ ನದಿ ದಂಡೆಯವರೆಗೆ ಇದೆ. ಆದರೆ ಹಾರಂಗಿ ಅಣೆಕಟ್ಟೆಯಿಂದ ಹೆಚ್ಚುವರಿಯಾಗಿ ನೀರನ್ನು ನದಿಗೆ ಹರಿಸಿದಾಗ ಕಾಯ್ದಿರಿಸಿದ ಜಾಗವು ಸಹ ಜಲಾವೃತಗೊಳ್ಳುತ್ತದೆ. ಕಳೆದ ಎರಡು ವರ್ಷಗಳಲ್ಲೂ ಈ ಜಾಗವು ಜಲಾವೃತಗೊಂಡಿತ್ತು. ಇಂತಹ ಜಾಗದಲ್ಲಿ ನಿವೇಶನ ಹಂಚಿಕೆಯನ್ನು ಮಾಡಲು ಹೋಗುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಈ ವ್ಯಾಪ್ತಿಯ ನಾಲ್ಕು ಗ್ರಾಮಗಳ ಗ್ರಾಮಸ್ಥರ ಆಗ್ರಹವಾಗಿದೆ. ಅಲ್ಲದೆ ನೀರಾವರಿ ಪ್ರದೇಶ ದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಮುಂದಾಗಿ ರುವುದು ಸರಿ ಯಾದ ಕ್ರಮವಲ್ಲ ಎಂದು ಈ ವ್ಯಾಪ್ತಿಯ ನಾಲ್ಕು ಗ್ರಾಮಗಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.