ಹೆಚ್.ಜೆ. ರಾಕೇಶ್
ಮಡಿಕೇರಿ, ಸೆ. ೭ : ದಸರಾ ಹಬ್ಬ ಬಂತೆAದರೆ ಇಡೀ ಕರುನಾಡು ಸಂಭ್ರಮದಲ್ಲಿ ಮಿಂದೇಳುತ್ತದೆ. ಸಡಗರ ಮನೆ ಮಾಡುತ್ತದೆ. ನಾಡದೇವಿ ಚಾಮುಂಡಿಗೆ ಶ್ರದ್ಧಾಭಕ್ತಿಯಿಂದ ಆರಾಧನೆ ನಡೆಯುತ್ತದೆ. ಮೈಸೂರಿನಲ್ಲಿ ಜಂಬೂ ಸವಾರಿ, ಸಾಂಪ್ರದಾಯಿಕ ಆಚರಣೆಗಳು ಇಡೀ ಪ್ರಪಂಚವನ್ನು ತಿರುಗಿ ನೋಡುವಂತೆ ಮಾಡುತ್ತದೆ. ಅದೇ ರೀತಿ ಮಂಜಿನ ನಗರಿ ಮಡಿಕೇರಿಯಲ್ಲಿ ವಿಜಯದಶಮಿ ತನ್ನದೇ ಆದ ವಿಶೇಷತೆ, ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿದೆ. ಆದರೆ, ಈ ಬಾರಿ ಮಡಿಕೇರಿ ದಸರಾ ನಡೆಸೋದು ಹೇಗೆ..? ಎಂಬ ಗೊಂದಲ ಸೃಷ್ಟಿಯಾಗಿದೆ.
ಕೊರೊನಾ ಕರಿನೆರಳು ದಸರಾದ ಮೇಲೆ ಈ ವರ್ಷವೂ ಬೀರಿದೆ. ಅಕ್ಟೋಬರ್ ೬ ರಿಂದ ನವರಾತ್ರಿ ಆರಂಭಗೊಳ್ಳಲಿದ್ದು, ಅ. ೧೫ಕ್ಕೆ ವಿಜಯದಶಮಿ ಮೂಲಕ ನಾಡಹಬ್ಬ ಕೊನೆಗೊಳುತ್ತದೆ. ಕಳೆದ ವರ್ಷ ಕೊರೊನಾ ಹಿನ್ನೆಲೆ ಸರಳವಾಗಿ ದಸರಾ ಆಚರಿಸಲಾಗಿತ್ತು. ಈ ವರ್ಷ ನಾಡಹಬ್ಬ ಸಮೀಪಿಸುತ್ತಿದೆ. ಆದರೆ, ಇನ್ನೂ ಕೂಡ ಈ ಬಗ್ಗೆ ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ. ಸರಳ ಆಚರಣೆಯಾದರೂ ಯಾವ ರೀತಿ ಆಚರಣೆಗಳು ನಡೆಯಬೇಕೆಂಬ ಗೋಜಿಗೂ ದಸರಾ ಸಮಿತಿ ಹೋಗಿಲ್ಲ. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ನಿಟ್ಟಿನಲ್ಲಿ ಯಾವುದೇ ರೂಪುರೇಷೆ ತಯಾರಿಗೂ ಮುಂದಾಗಿಲ್ಲ. ಇದು ದಸರಾ ಆಚರಣೆ ಬಗ್ಗೆ ಗೊಂದಲಕ್ಕೆ ಕಾರಣವಾಗಿದೆ.
ಮೈಸೂರು ದಸರಾ ಬೆಳಿಗ್ಗೆ ಜನರನ್ನು ಆಕರ್ಷಿಸಿದರೆ, ಮಡಿಕೇರಿ ದಸರಾ ಸೂರ್ಯ ಮುಳುಗಿದ ನಂತರ ತನ್ನ ಸೌಂದರ್ಯ ತೋರುತ್ತೆ. ಕರಗದ ಮೂಲಕ ಸಾಂಪ್ರದಾಯಿಕ ಆಚರಣೆ ಶುರುವಾಗಿ, ವಿಜಯದಶಮಿಯಂದು ದಶಮಂಟಪ ಶೋಭಾಯಾತ್ರೆ ಮೂಲಕ ಸಂಪನ್ನಗೊಳುತ್ತೆ. ಒಂಬತ್ತು ದಿನಗಳು ಕೂಡ ವಿವಿಧ ಕಾರ್ಯಕ್ರಮಗಳು ನಡೆಯುವುದು ಮಡಿಕೇರಿ ದಸರಾದ ವಿಶೇಷ. ಆದರೆ, ಈ ಬಾರಿ ಕೊರೊನಾ ಪರಿಸ್ಥಿತಿ ಇರುವುದರಿಂದ ದಸರಾ ಆಯೋಜನೆ ಹೇಗೆ.? ಎಂಬ ಪ್ರಶ್ನೆ ಸಹಜವಾಗಿ ಹುಟ್ಟಿಕೊಂಡಿದೆ.
ಸರಳ ಆಚರಣೆ ನಿಶ್ಚಿತ
ಕಳೆದ ನಾಲ್ಕು ವರ್ಷಗಳಿಂದ ಮಡಿಕೇರಿ ದಸರಾಕ್ಕೆ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಿವೆ. ೨೦೧೮, ೨೦೧೯ರಲ್ಲಿ ಮಹಾಮಳೆ ಕೊಡಗನ್ನು ನಡುಗಿಸಿದರೆ, ೨೦೨೦ ಹಾಗೂ ೨೦೨೧ ಕೊರೊನಾ ಪರಿಸ್ಥಿತಿ ಇಡೀ ಪ್ರಪಂಚದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಈಗಾಗಲೇ ಮೈಸೂರು ದಸರಾ ಸರಳ ಆಚರಣೆಗೆ ಸಂಬAಧಿಸಿದAತೆ ರಾಜ್ಯ ಸರಕಾರ ಅಂತಿಮ ನಿರ್ಧಾರ ತೆಗೆದುಕೊಂಡಿದೆ. ಸಾಂಪ್ರದಾಯಿಕ ಆಚರಣೆ ನಡೆಯಲಿದ್ದು, ಸೀಮಿತ ಜನರ ನಡುವೆ ಜಂಬೂ ಸವಾರಿ ಕೂಡ ಆಯೋಜನೆಗೊಂಡಿದೆ.
ಅದೇ ರೀತಿ ಮಡಿಕೇರಿಯಲ್ಲೂ ಸರಳ ಆಚರಣೆ ನಿಶ್ಚಿತ. ಆದರೆ, ಜಿಲ್ಲಾಡಳಿತ ಹಾಗೂ ದಸರಾ ಸಮಿತಿ ಈ ಬಗ್ಗೆ ಇನ್ನೂ
(ಮೊದಲ ಪುಟದಿಂದ) ಕಾರ್ಯಯೋಜನೆ ಕೈಗೊಂಡಿಲ್ಲ. ಮೈಸೂರು ದಸರಾ ಆಚರಣೆ ಘೋಷಣೆಯಾದ ಬಳಿಕವಾದರು ಆಚರಣೆಯ ಸಂಬAಧ ಚರ್ಚಿಸಬೇಕಾಗಿತ್ತು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಬೇಕಾಗಿತ್ತು.
ರಚನೆಯಾಗಬೇಕಾಗಿದೆ ಹೊಸ ಸಮಿತಿ
ಮಡಿಕೇರಿ ನಗರ ದಸರಾ ಸಮಿತಿ ಪ್ರತಿ ೨ ವರ್ಷಕ್ಕೊಮ್ಮೆ ಬದಲಾವಣೆಗೊಳ್ಳುತ್ತದೆ. ಈ ಬಾರಿ ಹೊಸ ಸಮಿತಿ ರಚನೆಯಾಗಬೇಕಾಗಿದೆ.
ಮಹಾಸಭೆ ನಡೆಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ. ಇವೆಲ್ಲ ಪ್ರಕ್ರಿಯೆಗಳು ಬಾಕಿ ಉಳಿದಿವೆ. ಈ ಬಗ್ಗೆ ಹಾಲಿ ಸಮಿತಿ ಗಮನಹರಿಸಿ ಸಭೆ ನಡೆಸಿ ಮುಂದಿನ ಜವಾಬ್ದಾರಿಯನ್ನು ನೀಡಬೇಕಾಗಿದೆ.
ಅನುದಾನ ಹೇಗೆ.?
ಹಿಂದಿನ ಮಡಿಕೇರಿ ದಸರಾಕ್ಕೆ ಹಣವನ್ನು ಸರಕಾರ ಬಿಡುಗಡೆಗೊಳಿಸುತ್ತಿತ್ತು. ಈ ಬಾರಿ ಸರಳ ಆಚರಣೆಗಾದರು ಅನುದಾನ ತರುವುದು ಹೇಗೆ.? ಎಂಬುದರ ಬಗ್ಗೆ ಚಿಂತಿಸಬೇಕಾಗಿದೆ. ಸರಕಾರ ಮೈಸೂರು ದಸರಾಕ್ಕೆ ಅನುದಾನ ಕಾಯ್ದಿರಿಸಿದಂತೆ ಮಡಿಕೇರಿ ದಸರಾಕ್ಕೆ ಕಾಯ್ದಿರಿಸುವುದಿಲ್ಲ. ಆದ್ದರಿಂದ ಅನುದಾನ ತರುವ ಪ್ರಯತ್ನ ಆಗಬೇಕಾಗಿದೆ ಎಂದು ದಸರಾ ಸಮಿತಿಯಲ್ಲಿ ದುಡಿದ ಹಿರಿಯರೊಬ್ಬರು ಹೇಳುತ್ತಾರೆ.
ಕೊನೆ ಘಳಿಗೆಯಲ್ಲಿ ಅನುದಾನ ತರಲು ಪರದಾಡುವ ಸ್ಥಿತಿಗೆ ಸಮಿತಿ ಬಾರದೆ, ದಸರಾ ಪೂರ್ವದಲ್ಲಿಯೇ ಈ ಬಗ್ಗೆ ಸ್ಪಷ್ಟತೆ ಇರಿಸಿಕೊಂಡು ಶಾಸಕರುಗಳ ಮೂಲಕ ಸರಕಾರದ ಮಟ್ಟದಲ್ಲಿ ಕಾರ್ಯಯೋಜನೆ ಬಗ್ಗೆ ವಿವರಿಸಿ ಅಗತ್ಯ ಅನುದಾನವನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಯತ್ನಗಳು ಶೀಘ್ರದಲ್ಲಿ ಪ್ರಾರಂಭಿಸಬೇಕಾಗಿವೆ.
ದಶಮಂಟಪ ಶೋಭಾಯಾತ್ರೆ
ದಸರಾದ ಪ್ರಮುಖ ಆಕರ್ಷಣೆ ಕೊನೆದಿನ ನಡೆಯುವ ದಶಮಂಟಪಗಳ ಶೋಭಾಯಾತ್ರೆ. ಆ ಬಗ್ಗೆಗಿನ ನಿಲುವು ಸಭೆಯಲ್ಲಿ ನಿರ್ಧಾರವಾಗಬೇಕಾಗಿದೆ.
ಕೊರೊನಾ ಪರಿಸ್ಥಿತಿ ಇರುವುದರಿಂದ ಶೋಭಾಯಾತ್ರೆ ಸಂಬAಧ ಸಲಹೆಗಳನ್ನು ಪಡೆದು ಅನುಷ್ಠಾನಗೊಳಿಸಬೇಕಾಗಿದೆ. ಕಳೆದ ವರ್ಷ ಕೊರೊನಾ ಪರಿಸ್ಥಿತಿ ನಡುವೆ ಸರಳವಾಗಿ ಶೋಭಾಯಾತ್ರೆ ನಡೆಯಿತು. ಈ ವರ್ಷ ಯಾವ ರೀತಿ ನಡೆಸಬೇಕೆಂಬ ಸ್ಪಷ್ಟತೆ ಮೊದಲೇ ದೊರೆತರೆ ದಶಮಂಟಪ ಸಮಿತಿಗೂ ಪ್ರಯೋಜನವಾಗುತ್ತದೆ.