ಸುಂಟಿಕೊಪ್ಪ, ಸೆ. ೮: ಗೌರಿ ಗಣೇಶ ಹಬ್ಬ ಆಚರಣೆ ಹಾಗೂ ಗೌರಿ ಗಣೇಶ ಪ್ರತಿಷ್ಠಾಪನೆೆಯನ್ನು ಸರ್ಕಾರದ ಮಾರ್ಗಸೂಚಿ ಅನ್ವಯ ಆಚರಿಸಬೇಕು. ಕೋವಿಡ್-೧೯ ನಿಯಮ ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಡಿವೈಎಸ್ಪಿ ಶೈಲೇಂದ್ರ ಹೇಳಿದರು.
ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಸುಂಟಿಕೊಪ್ಪ ವಿಭಾಗದ ಶ್ರೀ ಗೌರಿ ಗಣೇಶ ಉತ್ಸವ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು; ಉತ್ಸವ ಮೂರ್ತಿಯನ್ನು ೫ ದಿವಸ ಮಾತ್ರ ಕುಳ್ಳಿರಿಸಲು ಅವಕಾಶವಿದೆ. ನಿತ್ಯ ಪೂಜೆಗೆ ೨೦ ಮಂದಿ ಮಾತ್ರ ಭಾಗವಹಿಸಲು ಅವಕಾಶವಿದೆ. ಧ್ವನಿವರ್ಧಕ ಫ್ಲೆಕ್ಸ್ ಬಳಸುವಂತಿಲ್ಲ. ಉತ್ಸವ ಸಮಿತಿ ಪದಾಧಿಕಾರಿಗಳು ಕೋವಿಡ್ ಪರೀಕ್ಷೆಯ ದೃಢೀಕರಣ ಪತ್ರ ಸಲ್ಲಿಸಬೇಕು. ಈ ಎಲ್ಲಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಕಾನೂನು ವಿರುದÀ್ಧ ನಡೆದುಕೊಂಡರೆ ಸ್ಥಳೀಯ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಭೆಯಲ್ಲಿ ಸುಂಟಿಕೊಪ್ಪ ವಿಶ್ವ ಹಿಂದೂ ಪರಿಷತ್ತಿನ ಶ್ರೀ ಗೌರಿ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಬಿ.ಎಂ. ಸುರೇಶ, ವಿವಿಧ ಉತ್ಸವ ಸಮಿತಿ ಪದಾಧಿಕಾರಿಗಳು, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಕುಶಾಲನಗರ ವಿಭಾಗದ ವೃತ್ತನಿರೀಕ್ಷಕ ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಡಿ.ಐ. ಪುನೀತ್, ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.