ಬೆಂಗಳೂರು, ಸೆ. ೭: ನೆರೆ ರಾಜ್ಯ ಕೇರಳದಲ್ಲಿ ನಿಫಾ ವೈರಸ್ (ಎನ್‌ಐವಿ) ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳು, ಹೊಟೇಲ್, ಆಸ್ಪತ್ರೆ, ನರ್ಸಿಂಗ್ ಹೋಮ್, ಕಾರ್ಖಾನೆ ಮುಂತಾದ ಸಂಸ್ಥೆಗಳ ಆಡಳಿತ ವರ್ಗ, ಮಾಲೀಕರಿಗೆ ಕೇರಳದಿಂದ ಆಗಮಿಸುವ ತಮ್ಮ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಅಕ್ಟೋಬರ್ ಅಂತ್ಯದವರೆಗೆ ತಮ್ಮ ಪ್ರಯಾಣವನ್ನು ಮುಂದೂಡಲು ತಿಳಿಸಲಾಗಿದೆ.

(ಮೊದಲ ಪುಟದಿಂದ) ಕೇರಳದಿಂದ ರಾಜ್ಯಕ್ಕೆ ಆಗಮಿಸುವವರಿಗೆ ಕೋವಿಡ್-೧೯ ಪರೀಕ್ಷೆ ಪುನರಾವರ್ತನೆ, ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕ್ರಮಗಳ ಹೊರತಾಗಿಯೂ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳ ವರದಿಯನ್ನು ಪರಿಗಣಿಸಿ ಈ ಮಾರ್ಗಸೂಚಿ ಹೊರಡಿಸಲಾಗಿದೆ. ಕೇರಳ ಉದ್ಯೋಗಿಗಳು ಅಕ್ಟೋಬರ್ ಅಂತ್ಯದವರೆಗೂ ಕರ್ನಾಟಕಕ್ಕೆ ಬಾರದಂತೆ ಅಥವಾ ಮುಂದೂಡುವAತೆ ಎಲ್ಲಾ ಆಡಳಿತ ಮಂಡಳಿ, ಶಿಕ್ಷಣ ಸಂಸ್ಥೆಗಳ ಪ್ರಿನ್ಸಿಪಾಲರು, ನರ್ಸಿಂಗ್, ಪ್ಯಾರಾ ಮೆಡಿಕಲ್ ಸಂಸ್ಥೆಗಳು, ಆಸ್ಪತ್ರೆಗಳ ಮಾಲೀಕರು, ನರ್ಸಿಂಗ್ ಹೋಮ್‌ಗಳು, ಕಚೇರಿಗಳು, ಹೊಟೇಲ್‌ಗಳು, ಕಾರ್ಖಾನೆಗಳು, ಕೈಗಾರಿಕೆಗಳು ಮತ್ತಿತರರಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ನೆರೆಯ ಕೇರಳದ ಪ್ರಸ್ತುತ ಪರಿಸ್ಥಿತಿ ಪರಿಗಣಿಸಿ, ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ, ಹೊಟೇಲ್, ಆಸ್ಪತ್ರೆ, ನರ್ಸಿಂಗ್ ಹೋಮ್, ಕಾರ್ಖಾನೆ ಮುಂತಾದ ಸಂಸ್ಥೆಗಳ ಆಡಳಿತ ವರ್ಗ, ಮಾಲೀಕರಿಗೆ ಕೇರಳದಿಂದ ಆಗಮಿಸುವ ತಮ್ಮ ವಿದ್ಯಾರ್ಥಿಗಳು/ಉದ್ಯೋಗಿಗಳಿಗೆ ಅಕ್ಟೋಬರ್ ಅಂತ್ಯದವರೆಗೆ ತಮ್ಮ ಪ್ರಯಾಣವನ್ನು ಮುಂದೂಡಲು ತಿಳಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಅಕ್ಟೋಬರ್ ಅಂತ್ಯದವರೆಗೂ ಕೇರಳಕ್ಕೆ ಪ್ರಯಾಣಿಸದಂತೆ ರಾಜ್ಯ ಸರ್ಕಾರ ಹೇಳಿದೆ. ತುರ್ತು ಅಗತ್ಯವಿಲ್ಲದಿದ್ದಲ್ಲಿ ಕೇರಳ ಪ್ರಯಾಣವನ್ನು ಮುಂದೂಡುವAತೆ ಸರ್ಕಾರ ಸಲಹೆ ನೀಡಿದೆ. ಸಾರ್ವಜನಿಕರ ಹಿತರಕ್ಷಣೆ ನಿಟ್ಟಿನಲ್ಲಿ ಕೋವಿಡ್-೧೯ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಈ ಸೂಚನೆ ಹೊರಡಿಸಿರುವುದಾಗಿ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು ಮತ್ತು ಚಾಮರಾಜನಗರದಲ್ಲಿ ಬಿಗಿ ಕಣ್ಗಾವಲು ನಿಯೋಜಿಸಲಾಗುತ್ತಿದೆ. ಈ ಕುರಿತು ಮಾರ್ಗಸೂಚಿ ಬಿಡುಗಡೆಗೊಳಿಸಿರುವ ರಾಜ್ಯ ಆರೋಗ್ಯ ಇಲಾಖೆ, ಕೇರಳದಿಂದ ಆಗಮಿಸುವವರನ್ನು ತಪಾಸಣೆಗೊಳಪಡಿಸುವವರನ್ನು ಜ್ವರ, ಮಾನಸಿಕ ಸ್ಥಿತಿಗತಿ, ದುರ್ಬಲತೆ, ತಲೆನೋವು, ಶ್ವಾಸಕೋಶದ ತೊಂದರೆ, ಕೆಮ್ಮು, ವಾಂತಿ, ಸ್ನಾಯುಸೆಳೆತದಂತಹ ಲಕ್ಷಣಗಳಿವೆಯೇ ಎಂದು ಪರಿಶೀಲಿಸಬೇಕು ಎಂದು ಸೂಚಿಸಿದೆ. ಸೋಂಕಿನ ಯಾವುದೇ ಲಕ್ಷಣಗಳು ಕಂಡುಬAದಲ್ಲಿ ಅವರ ಮಾದರಿಗಳನ್ನು ಪಡೆದು ಪುಣೆಯ ಎನ್‌ಐವಿ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಇಲಾಖೆ ತಿಳಿಸಿದೆ.