ಸೋಮವಾರಪೇಟೆ, ಸೆ. ೮: ಸರ್ಕಾರಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಗೌರಿ-ಗಣೇಶ ಉತ್ಸವ ಆಚರಿಸುವಂತೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಸೂಚನೆ ನೀಡಿದರು.
ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಲ್ಲಿನ ಜಾನಕಿ ಸಭಾಂಗಣದಲ್ಲಿ ಆಯೋಜಿಸಿದ್ದ ಗೌರಿ ಗಣೇಶ ಉತ್ಸವ ಮೂರ್ತಿ ಪ್ರತಿಷ್ಠಾಪನಾ ಸಮಿತಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರವು ಗೌರಿ ಗಣೇಶ ಉತ್ಸವ ಸಂಬAಧ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ವಾರಾಂತ್ಯ ಕರ್ಫ್ಯೂ ಇರುವ ಶನಿವಾರ ಹಾಗೂ ಭಾನುವಾರದಂದು ಉತ್ಸವ ಮೂರ್ತಿಗಳ ವಿಸರ್ಜನೆಗೆ ಅವಕಾಶ ಕಲ್ಪಿಸಿದೆ ಎಂದರು.
ಡಿವೈಎಸ್ಪಿ ಶೈಲೇಂದ್ರ ಮಾತನಾಡಿ, ಕೊರೊನಾ ಹಿನ್ನೆಲೆ ಈ ಬಾರಿ ಸರಳ ಆಚರಣೆಗೆ ಸರ್ಕಾರ ನಿರ್ದೇಶನ ನೀಡಿದ್ದು, ಐದು ದಿನಗಳ ಕಾಲ ಉತ್ಸವ ನಡೆಸಲು ಅನುಮತಿ ಕೊಟ್ಟಿದೆ. ಸಂಜೆ ೬ ಗಂಟೆಯ ಒಳಗೆ ಉತ್ಸವ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು. ಎಲ್ಲರೂ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಶನಿವಾರಸಂತೆ ಪೊಲೀಸ್ ನಿರೀಕ್ಷಕ ಪರಶಿವಮೂರ್ತಿ, ಪೊಲೀಸ್ ನಿರೀಕ್ಷಕ ಬಿ.ಜಿ. ಮಹೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಸೋಮವಾರಪೇಟೆ ಠಾಣಾಧಿಕಾರಿ ಶ್ರೀಧರ್, ಸೋಮವಾರಪೇಟೆ, ಶನಿವಾರಸಂತೆ ಠಾಣಾ ವ್ಯಾಪ್ತಿಯ ವಿವಿಧ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.