ಕೂಡಿಗೆ, ಸೆ. ೭: ಕುಶಾಲನಗರ ತಾಲೂಕಿನ ೧೦ ಗ್ರಾಮಗಳಲ್ಲಿ ಮತ್ತು ಸೋಮವಾರಪೇಟೆ ತಾಲೂಕಿನ ಹಲವು ಗ್ರಾಮಗಳಲ್ಲಿ ಈ ಬಾರಿ ಮಳೆ ಆಧಾರಿತವಾಗಿ ಮುಸುಕಿನ ಜೋಳದ ಬೆಳೆಯನ್ನು ಬೆಳೆಯಲಾಗಿತ್ತು. ಅದರಂತೆ ಜೋಳದ ಬೆಳೆಯು ಉತ್ತಮವಾಗಿದ್ದು, ಈಗಾಗಲೇ ಈ ವ್ಯಾಪ್ತಿಯ ರೈತರು ಕಟಾವು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕುಶಾಲನಗರ ತಾಲೂಕಿನ ಅಳುವಾರ, ಸಿದ್ಧಲಿಂಗಪುರ, ೬ನೇ ಹೊಸಕೋಟೆ, ಹೆಬ್ಬಾಲೆ, ತೊರೆನೂರು, ಸೀಗೆಹೊಸೂರು, ಕೂಡಿಗೆ, ಚಿಕ್ಕತ್ತೂರು, ಭುವನಗಿರಿ, ಶಿರಂಗಾಲ, ದೊಡ್ಡತ್ತೂರು, ಹುದುಗೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಈ ಬಾರಿ ಮಳೆಯು ಜೋಳದ ಬೆಳೆಗೆ ಅನುಕೂಲವಾಗುವಂತೆ ಹದವಾಗಿ ಬಿದ್ದ ಪರಿಣಾಮ ಮಳೆ ಆಧಾರಿತ ಬೆಳೆಯಾದ ಜೋಳವು ಉತ್ತಮವಾಗಿ ಕಾಳುಕಟ್ಟಿ ಬಂದಿದೆ. ಈ ಭಾಗದ ರೈತರು ಮಳೆ ನಡುವೆಯೂ ಕಟಾವು ಮಾಡಿ ತಮ್ಮ ಜಮೀನಿನಲ್ಲಿ ಗೂಡು ಮಾದರಿಯಲ್ಲಿ ಸಂಗ್ರಹಿಸಿದ್ದಾರೆ.

ಜೋಳದ ಬೆಲೆಯಲ್ಲಿ ಏರಿಳಿತಗಳು ಕಂಡು ಬರುತ್ತಿರುವ ಹಿನ್ನೆಲೆ ಕೆಲ ರೈತರು ತಮ್ಮ ಜಮೀನುಗಳಲ್ಲಿ ಆಧುನಿಕ ಜೋಳ ಬಿಡಿಸುವ ಯಂತ್ರದ ಮೂಲಕ ಜೋಳವನ್ನು ಬಿಡಿಸಿ ಮಾರಾಟ ಮಾಡುತ್ತಿದ್ದಾರೆ.

ನಿಗದಿತ ದರ ಇಲ್ಲದ ಕಾರಣದಿಂದಾಗಿ ಖರೀದಿದಾರರು ಒಂದು ಕ್ವಿಂಟಾಲ್‌ಗೆ ಕೇವಲ ೧,೫೦೦ ರೂ. ಮಾತ್ರ ನೀಡುತ್ತಿದ್ದು, ಮಳೆ ಇರುವುದರಿಂದ ಜೋಳ ಮೊಳಕೆ ಬರಬಹುದೆಂದು ರೈತರು ಮಾರಾಟ ಮಾಡಲು ಸಿದ್ಧರಾಗಿದ್ದಾರೆ.