ಮಡಿಕೇರಿ, ಸೆ. ೭: ಕೊಡಗಿನ ಗ್ರಾಮೀಣ ಭಾಗದ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಜಾಗ ಮಂಜೂರಾತಿ ಮಾಡಬೇಕೆಂದು ವಿವಿಧ ಗ್ರಾ.ಪಂ ಸದಸ್ಯರುಗಳು ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರಿಕೆ ಗ್ರಾ.ಪಂ. ಉಪಾಧ್ಯಕ್ಷ ಬಾಲಚಂದ್ರ ನಾಯರ್, ಯಾವುದೇ ವಸತಿ ಯೋಜನೆಯಡಿಯಲ್ಲಿ ಇಂದಿನ ತನಕ ಕರಿಕೆ, ಕುಂದಚೇರಿ, ಕುಂಜಿಲ ಕಕ್ಕಬ್ಬೆ, ಬೇಂಗೂರು ಚೇರಂಬಾಣೆ, ಮದೆ ಸೇರಿದಂತೆ ಇನ್ನಿತರ ಗ್ರಾಮೀಣ ಪ್ರದೇಶಗಳಿಗೆ ನಿವೇಶನ ಮಂಜೂರು ಮಾಡಿಲ್ಲ. ಇದರಿಂದ ಹಲವು ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಸರಕಾರ ಈ ಬಗ್ಗೆ ಗಮನಹರಿಸಿ ಪ್ರತಿ ಗ್ರಾ.ಪಂ.ಗೆ ಕನಿಷ್ಟ ನೂರು ಮನೆಗಳನ್ನು ಮಂಜೂರು ಮಾಡಲು ಕ್ರಮವಹಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರಿಗೆ ರೂ. ೫ ಲಕ್ಷ, ಸಾಮಾನ್ಯ ವರ್ಗಕ್ಕೆ ರೂ. ೩ ಲಕ್ಷ ಮನೆ ನಿರ್ಮಾಣಕ್ಕೆಂದು ಅನುದಾನ ನೀಡಬೇಕು. ರೂ. ೧ ಲಕ್ಷ ಆದಾಯ ದೃಢೀಕರಣ ಹೊಂದಿರುವವರಿಗೆ ಮನೆ ಪಡೆಯಲು ಅರ್ಹತೆ ನೀಡಬೇಕು ಎಂದು ಆಗ್ರಹಿಸಿದರು.

ಕುಂಜಿಲ ಕಕ್ಕಬ್ಬೆ ಗ್ರಾ.ಪಂ. ಅಧ್ಯಕ್ಷ ಸಂಪನ್ ಅಯ್ಯಪ್ಪ ಮಾತನಾಡಿ, ಜಲಜೀವನ ಯೋಜನೆ ಉತ್ತಮ ಕಾರ್ಯಕ್ರಮವಾಗಿದೆ. ಆದರೆ, ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ಕೊರತೆ ಇದೆ. ಈ ಯೋಜನೆ ಅನುಷ್ಠಾನಗೊಳಿಸುತ್ತಿರುವುದರಿಂದ ೧೫ನೇ ಹಣಕಾಸು ಯೋಜನೆಯ ನಿರ್ಬಂಧಿತ ಅನುದಾನ ಶೇ. ೫೦ ಅನ್ನು ಕುಡಿಯುವ ನೀರಿನ ಮೀಸಲಿರಿಸಬೇಕಾದ ಅವಶ್ಯಕತೆ ಇಲ್ಲದಿರುವುದರಿಂದ, ಆ ಮೊತ್ತವನ್ನು ಅನಿರ್ಬಂಧಿತ ಅನುದಾನಕ್ಕೆ ಮೀಸಲಿಡುವಂತೆ ಒತ್ತಾಯಿಸಿದರು.

ಕುಂದಚೇರಿ ಗ್ರಾ.ಪಂ. ಸದಸ್ಯ ಕೆ.ಯು. ಹ್ಯಾರಿಸ್ ಮಾತನಾಡಿ, ಗ್ರಾ.ಪಂ.ಗಳಿಗೆ ಶಾಸನಬದ್ಧ ಅನುದಾನ ಸಮರ್ಪಕವಾಗಿ ಬಿಡುಗಡೆಯಾಗುತ್ತಿಲ್ಲ. ಇದರಿಂದ ಪಂಚಾಯ್ತಿ ನಿರ್ವಹಣೆ ಕಷ್ಟಕರವಾಗಿದೆ. ಜೊತೆಗೆ ನರೇಗಾ ಹಣ ಕಾರ್ಮಿಕರ ಖಾತೆಗೆ ಬಿಡುಗಡೆಯಾಗಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಮದೆ ಗ್ರಾ.ಪಂ ಸದಸ್ಯ ಅಗಸ್ಟಿನ್ ಜಯರಾಜ್, ಬೇಂಗೂರು ಚೇರಂಬಾಣೆ ಗ್ರಾ.ಪಂ. ಸದಸ್ಯ ಕೆ.ಎಂ. ಬಷೀರ್, ಕುಂದಚೇರಿ ಗ್ರಾ.ಪಂ. ಸದಸ್ಯ ಪಿ.ಬಿ. ದಿನೇಶ್ ಇದ್ದರು.