ಕಣಿವೆ, ಸೆ. ೫ : ಭಾನುವಾರ ಬೆಳಗ್ಗೆ ಬಾಣಾವರದಲ್ಲಿ ಹತ್ತು ಗಂಟೆ ಸಮಯದಲ್ಲಿ ಒಂಟಿ ಸಲಗವೊಂದು ರಾಜ ಗಾಂಭೀರ್ಯದ ನಡಿಗೆ ಯೊಂದಿಗೆ ಬಂದು ನೋಡುಗರಲ್ಲಿ ದಿಗ್ಭçಮೆ ಮೂಡಿಸಿತು.

ಬಾಣಾವರದ ಅರಣ್ಯ ಇಲಾಖೆಯ ವಸತಿ ಗೃಹದ ಬಳಿ ಧಾವಿಸಿದ ಎತ್ತರ ಹಾಗೂ ದಪ್ಪನೆಯ ಈ ಸಲಗ ಶನಿವಾರ ರಾತ್ರಿ ಬಾಣಾವರದ ಅರಣ್ಯದೊಳಗಿಂದ ನಾಡಿಗೆ ಬಂದು ಹಸಿವು ನೀಗಿಸಿ ಕೊಂಡು ಅರಣ್ಯಕ್ಕೆ ಮರಳಲು ಹೆದ್ದಾರಿಯಲ್ಲಿನ ವಾಹನಗಳ ಶಬ್ದಕ್ಕಂಜಿ ಅಲ್ಲೇ ಅರಣ್ಯ ವಸತಿ ಗೃಹದ ಬಳಿಯ ಬೇಲಿಯೊಳಗೆ ಇದ್ದು, ಬಳಿಕ ಜನ ಹಾಗೂ ವಾಹನಗಳ ಸಂದಣಿ ಹೆಚ್ಚಾಗುತ್ತಿದ್ದಂತೆ ಸೂಕ್ಷ್ಮ ಅರಿತ ಸಲಗ ಜನರಿಗಂಜದೆ ರಾಜಗಾಂಭೀರ್ಯ ದಿಂದ ಹೆಜ್ಜೆ ಹಾಕುತ್ತಾ ಶನಿವಾರಸಂತೆ ಕುಶಾಲನಗರ ರಾಜ್ಯ ಹೆದ್ದಾರಿಯನ್ನು ದಾಟಿ ಮರಿಯಾ ನಗರದತ್ತ

(ಮೊದಲ ಪುಟದಿಂದ) ಮುಖ ಮಾಡಿ ಅರಣ್ಯದೊಳಗೆ ಧಾವಿಸಿತು ಎಂದು ಪ್ರತ್ಯಕ್ಷದರ್ಶಿ ಶಿರಂಗಾಲದ ನಟೇಶ್ ಎಂಬವರು ‘ಶಕ್ತಿ’ಗೆ ಮಾಹಿತಿ ನೀಡಿದರು.

ಅರಣ್ಯ ಸಿಬ್ಬಂದಿಯೋರ್ವರು ಸ್ಥಳದಲ್ಲಿದ್ದು, ಸಾರ್ವಜನಿಕರು ಹಾಗೂ ಸಾರ್ವಜನಿಕ ವಾಹನಗಳ ಚಾಲಕರ ಸಹಕಾರ ಪಡೆದು ಸಲಗವನ್ನು ಕಾಡಿಗೆ ಮರಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಾಣಾವರ ವ್ಯಾಪ್ತಿಯಲ್ಲಿ ಹಾಡಹಗಲೇ ಕಾಡಾನೆ ಗಳು ಹಾಗೂ ಒಂಟಿ ಸಲಗ ಪ್ರತ್ಯಕ್ಷ ಗೊಳ್ಳುತ್ತಿರುವುದರಿಂದ ಸಾರ್ವಜನಿಕರು ಈ ಪ್ರದೇಶದಲ್ಲಿ ಎಚ್ಚರವಹಿಸಿ ಸಂಚಾರ ನಡೆಸಬೇಕೆಂದು ಅರಣ್ಯಾಧಿಕಾರಿಗಳು ಕೋರಿದ್ದಾರೆ.