ಮಡಿಕೇರಿ, ಸೆ. ೨: ಈಶ ಫೌಂಡೇಶನ್ ಹಮ್ಮಿಕೊಂಡಿರುವ ಕಾವೇರಿ ಕೂಗು ಗಿಡನೆಡುವ ಕಾರ್ಯಕ್ರಮದ ಆ್ಯಪ್ ಅನ್ನು ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಪಶ್ಚಿಮಘಟ್ಟಗಳ ಕಾರ್ಯಪಡೆಯ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಇದೊಂದು ಉತ್ತಮ ಕಾರ್ಯ ಯೋಜನೆಯಾಗಿದ್ದು, ಪ್ರಸ್ತುತ ಕಾಲಘಟ್ಟದಲ್ಲಿ ಪರಿಸರ ಸಮತೋಲನ ಕಾಯ್ದುಕೊಳ್ಳಲು ಪ್ರತಿಯೊಬ್ಬರು ಸಹಕರಿಸುವುದಲ್ಲದೇ ಬಯಲು ಸೀಮೆ ಪ್ರದೇಶಗಳಲ್ಲಿ ಕೂಡ ಗಿಡ-ಮರ ಬೆಳೆಸಿ ಹಸಿರೀಕರಣ ಮಾಡುವಂತಾಗಬೇಕು.

ಈ ನಿಟ್ಟಿನಲ್ಲಿ ಈಶ ಫೌಂಡೇಶನ್ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಜಾಗೃತಿ ಮೂಡಿಸಿ ಗ್ರಾಮಸ್ಥರನ್ನು ಜಾಗೃತಗೊಳಿಸಲು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಕೊಡಗು ಉಪವಿಭಾಗದ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಪೂರ್ಣಿಮಾ, ವೀರಾಜಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ರೋಷಿಣಿ, ವಲಯ ಅರಣ್ಯ ಅಧಿಕಾರಿ ಸುಹನಾ ಸೇರಿದಂತೆ ಅರಣ್ಯ ಸಿಬ್ಬಂದಿಗಳು ಹಾಗೂ ಈಶ ಫೌಂಡೇಶನ್‌ನ ಸಿಬ್ಬಂದಿಗಳು ಹಾಜರಿದ್ದರು.

- ಸುಧೀರ್ ಹೊದ್ದೆಟ್ಟಿ