ಮಡಿಕೇರಿ, ಸೆ. ೨: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾ. ೬ ರಂದು ಬೆಂಗಳೂರು ಮುಖ್ಯ ರೈಲ್ವೆ ನಿಲ್ದಾಣದಿಂದ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. ೧೭ ರಂದು ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಆಗಸ್ಟ್ ಅಂತ್ಯದೊಳಗೆ ನೌಕರರ ಬೇಡಿಕೆ ಈಡೇರಿಸುವ ಭರವಸೆಯನ್ನು ಸರ್ಕಾರ ನೀಡಿತ್ತು. ಪರಿಣಾಮ ಹೋರಾಟ ಹಿಂಪಡೆಯಲಾಗಿತ್ತು. ಆದರೆ, ಆಗಸ್ಟ್ ತಿಂಗಳು ಕಳೆದರು ಕೂಡ ಯಾವೊಂದು ಸಭೆ, ಭರವಸೆ ಈಡೇರಿಸುವ ಲಕ್ಷಣ ಕಾಣುತ್ತಿಲ್ಲ. ಈ ಹಿನ್ನೆಲೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಪಂಚಾಯಿತಿ ಸಿಬ್ಬಂದಿಗಳಿಗೆ ಕಳೆದ ೮ ರಿಂದ ೧೦ ತಿಂಗಳಿAದ ಸಿಗದ ವೇತನವನ್ನು ಪಾವತಿಸಬೇಕು. ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿ ಅಂಚಿನಲ್ಲಿರುವ ಬಿಲ್ ಕಲೆಕ್ಟರ್ ಗುಮಾಸ್ತ ನೇರ ನೇಮಕಾತಿಗೆ ಮಾರಕವಾಗಿರುವ ೩/೭/೨೦೨೦ರ ಆದೇಶ ಹಿಂಪಡೆದು ಕಾರ್ಯದರ್ಶಿ ಗ್ರೇಡ್-೨ ಮತ್ತು ಲೆಕ್ಕ ಸಹಾಯಕ ಹುದ್ದೆ ನೇಮಕಾತಿಗೆ ತಕ್ಷಣ ಆದೇಶ ಮಾಡಬೇಕು. ಪಂಚಾಯ್ತಿಗಳಲ್ಲಿ ವಿವಿಧ ಹಂತದಲ್ಲಿ ಕೆಲಸ ಮಾಡುವ ನೌಕರರಿಗೆ ಬೆಲೆ ಏರಿಕೆಗೆ ಅನುಗುಣವಾಗಿ ವೇತನ ಪರಿಷ್ಕರಣೆ ಮಾಡಬೇಕು. ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು. ಪದೋನ್ನತಿ ಮೂಲಕ ನೇರ ನೇಮಕಾತಿಗೆ ಅವಕಾಶ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹೆಚ್.ಜಿ. ನವೀನ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಎಂ.ಬಿ. ಹರೀಶ್ ಉಪಸ್ಥಿತರಿದ್ದರು.