ಗುಡ್ಡೆಹೊಸೂರು, ಸೆ. ೨: ಬೆಂಗಳೂರಿನ ಎಫ್.ಎಸ್.ವಿ. ಮೈದಾನದಲ್ಲಿ ನಡೆದ ೨೦೨೦-೨೧ನೇ ಸಾಲಿನ ಎಫ್.ಎಸ್.ವಿ. "ಸಿ" ಡಿವಿಜನ್ ಫುಟ್‌ಬಾಲ್ ಪಂದ್ಯಾಟದಲ್ಲಿ ಕೊಡಗು ಫುಟ್‌ಬಾಲ್ ಕ್ಲಬ್ ರನ್ನರ್ ಟ್ರೋಫಿ ಪಡೆಯಿತು. ಆಗಸ್ಟ್ ೨೭, ೨೯ರಂದು ನಡೆದ ಈ ಪಂದ್ಯಾಟದಲ್ಲಿ ಕೊಡಗು ಫುಟ್‌ಬಾಲ್ ಕ್ಲಬ್ ತಂಡವು ಬೆಂಗಳೂರಿನ ತಂಡಗಳಾದ ರೋನಾಲ್ಡೋ ಎಫ್.ಸಿ. ಮತ್ತು ಬೆಂಗಳೂರಿನ ಸಿಟಿ ಎಫ್.ಸಿ ತಂಡಗಳನ್ನು ಎದುರಿಸಿ ಎರಡನೇ ಸ್ಥಾನವನ್ನು ಗಳಿಸುವುದರೊಂದಿಗೆ "ರನ್ನರ್ ಅಪ್" ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಆಟವಾಡಿದ ಒಟ್ಟು ೧೮ ಪಂದ್ಯಗಳಲ್ಲಿ ೧೫ ನ್ನು ಗೆದ್ದು ಒಂದನ್ನು ಡ್ರಾ ಮಾಡಿಕೊಂಡ ಕೊಡಗು ಕ್ಲಬ್ಬಿನ ತಂಡದ ಆಟ ಅಮೋಘವಾಗಿತ್ತು.
ಬೆಂಗಳೂರಿನ ತಂಡಗಳು ಹೊರ ರಾಜ್ಯ, ಬೇರೆ ದೇಶಗಳಿಂದ ಆಟಗಾರರನ್ನು ಕರೆತಂದು ಆಡಿಸಿದ್ದಾರೆ. ಕೊಡಗು ಎಫ್.ಸಿ ತಂಡವು ಕೊಡಗಿನ ಆಟಗಾರರನ್ನೇ ಹೊಂದಿತ್ತು. ಇದರ ಶ್ರೇಯಸ್ಸು ಗುಡ್ಡೆಹೊಸೂರಿನ ಐ.ಎನ್.ಎಸ್. ಕ್ರೀಡಾ ಸಂಸ್ಥೆಗೆ ಸಲ್ಲಬೇಕಾಗಿದೆ. ಅಲ್ಲದೆ ಈ ಕ್ರೀಡಾ ಸಂಸ್ಥೆಯ ಸಂಸ್ಥಾಪಕ ಐಚೆಟ್ಟಿರ ಪೊನ್ನಪ್ಪ ಅವರ ಪರಿಶ್ರಮ ಇದರಲ್ಲಿ ಅಡಕವಾಗಿದೆ.
ಕೊಡಗು ಫುಟ್‌ಬಾಲ್ ಕ್ಲಬ್ ತಂಡವು ಇದೀಗ ಸೂಪರ್ ಡಿವಿಜನ್ ಲೀಗ್ ಪ್ರವೇಶಿಸಿದ್ದು, ೨೦೨೧ರ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಈ ಪಂದ್ಯಾವಳಿಯು ನಡೆಯಲಿದೆ.
ಕೊಡಗು ಎಫ್.ಸಿ. ತಂಡದ ಆಟಗಾರರು ಸದ್ಯಕ್ಕೆ ಬೆಂಗಳೂರಿನಲ್ಲಿ ತರಬೇತಿಯನ್ನು ಪಡೆಯುತ್ತಿದ್ದು, ಇದರಿಂದ ಉತ್ತಮ ಆಟವನ್ನು ಪ್ರದರ್ಶಿಸಲು ಸಹಕಾರಿಯಾಗಲಿದೆ ಎಂದು ಗುಡ್ಡೆಹೊಸೂರಿನ ಐಚೆಟ್ಟಿರ ಪೊನ್ನಪ್ಪ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಸೂಪರ್ ಡಿವಿಜನ್ ಲೀಗ್‌ನಲ್ಲಿ ಆಡಲು ತಂಡದ ಎಲ್ಲಾ ಆಟಗಾರರು ಕೊಡಗಿನಿಂದಲೇ ಇರುವಂತೆ ಶ್ರಮಿಸುವುದಾಗಿ ಪೊನ್ನಪ್ಪ ಅವರು ತಿಳಿಸಿದರು. ಗುಡ್ಡೆಹೊಸೂರಿನ ಐ.ಎನ್.ಎಸ್. ಕ್ರೀಡಾಂಗಣದಲ್ಲಿ ತರಬೇತಿ ಪಡೆದ ಹಲವು ಮಂದಿ ಆಟಗಾರರು ಜಿಲ್ಲೆಯ ಮತ್ತು ರಾಜ್ಯದ ವಿವಿಧ ತಂಡಗಳಲ್ಲಿ ಭಾಗವಹಿಸುತ್ತಿದ್ದಾರೆ.
-ಗಣೇಶ್ ಕುಡೆಕ್ಕಲ್.