ಕೂಡಿಗೆ, ಆ. ೩೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರ ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ಘಟಕದ ಅಭಿವೃದ್ಧಿಗೆ ಒಂದು ಕೋಟಿ ವೆಚ್ಚದ ಕ್ರಿಯಾ ಯೋಜನೆ ರೂಪಿಸಿದ್ದು, ಈಗಾಗಲೇ ಕಾರ್ಯಗತಗೊಳಿಸಲು ವಿವಿಧ ಹಂತಗಳಲ್ಲಿ ಸಿದ್ಧತೆ ನಡೆಯುತ್ತಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ ತಿಳಿಸಿದ್ದಾರೆ.
ಭುವನಗಿರಿ ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ಪ್ರಾರಂಭ ಮಾಡಿದ ಪರಿಣಾಮವಾಗಿ ಸುತ್ತಮುತ್ತಲಿನ ವಾಸದ ಮನೆಗಳಿಗೆ ಕಸದ ವಾಸನೆಯಿಂದಾಗಿ ತೀವ್ರ ತೊಂದರೆ ಆಗುತ್ತಿವೆ ಎಂಬ ದೂರಿನ ಮೇರೆಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸ್ಥಳ ಪರಿಶೀಲನೆ ನಡೆಸಿದರು.
ನಂತರ ಮಾಸಿಕ ಸಭೆಯಲ್ಲಿ ಕಸ ವಿಲೇವಾರಿ ಘಟಕವನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಮತ್ತು ಯಾವುದೇ ರೀತಿಯಲ್ಲಿ ಘಟಕದ ಹೊರಗಡೆಗೆ ಕಸದ ದುರ್ಗಂಧ ಬಾರದ ಹಾಗೆ ದೇಶದ ವಿವಿಧ ಮುಖ್ಯ ಪಟ್ಟಣಗಳಲ್ಲಿ ಅಳವಡಿಕೆ ಮಾಡಿರುವ ಅತ್ಯಾಧುನಿಕ ತಂತ್ರಜ್ಞಾನ ಯಂತ್ರಗಳನ್ನು ಅಳವಡಿಕೆ ಮಾಡಲು ಕ್ರಿಯಾ ಯೋಜನೆ ಸಿದ್ಧತೆಯಾಗಿ ಯಂತ್ರಗಳ ಖರೀದಿಯ ಯೋಜನೆ ಪ್ರಗತಿಯಲ್ಲಿದೆ ಎಂದು ಪಟ್ಟಣ ಪಂಚಾಯಿತಿ ಇಂಜಿನಿಯರ್ ತಿಳಿಸಿದ್ದಾರೆ.
ಗ್ರಾಮಸ್ಥರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದAತೆ ಮತ್ತು ನೂತನ ಮಾದರಿ ಯಂತ್ರಗಳ ಅಳವಡಿಕೆಯ ಮೂಲಕ ಒಣಕಸ ಮತ್ತು ಹಸಿಕಸ ಬೇರೆ ಮಾಡಿ ಅದರ ಮೂಲಕ ಸಾವಯುವ ಗೊಬ್ಬರ ತಯಾರಿಸುವ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ ತಿಳಿಸಿದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ