ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ಹೊಸೂರಿನ ಡಿಎಂಕೆ ಶಾಸಕರ ಪುತ್ರ ಸೇರಿ ೭ ಮಂದಿ ಸಾವು
ಬೆಂಗಳೂರು, ಆ. ೩೧: ಬೆಂಗಳೂರಿನಲ್ಲಿ ಕಳೆದ ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ದುರ್ಘಟನೆಯಲ್ಲಿ ೭ ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ಈ ದುರ್ಘಟನೆ ಸಂಭವಿಸಿದ್ದು, ಮೃತರಲ್ಲಿ ಮೂವರು ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದ್ದಾರೆ. ಎಲ್ಲರೂ ೨೦ ರಿಂದ ೩೦ ವರ್ಷದೊಳಗಿನ ಯುವಕ-ಯುವತಿಯರಾಗಿದ್ದಾರೆ. ಕಳೆದ ಮಧ್ಯರಾತ್ರಿ ಆಡಿ ಕ್ಯೂ ೩ ಕಾರು ಫುಟ್‌ಪಾತ್ ಮೇಲಿದ್ದ ಬೀದಿ ದೀಪದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲಿಯೇ ಆರು ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಕರುಣಾಸಾಗರ, ಬಿಂದು, ಇಶಿತಾ, ಡಾ ಧನುಶಾ, ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ ಎಂದು ಗುರುತಿಸಲಾಗಿದೆ. ಮೃತಪಟ್ಟವರಲ್ಲಿ ಪ್ರಮುಖರು ಕರುಣಾಸಾಗರ್ ಹೊಸೂರಿನ ಡಿಎಂಕೆ ಶಾಸಕ ವೈ.ಪ್ರಕಾಶ್ ಪುತ್ರ ಮತ್ತು ಅವರು ಮದುವೆಯಾಗಬೇಕಿದ್ದ ಯುವತಿ ಬಿಂದು. ನಿನ್ನೆ ಸಾಯಂಕಾಲ ಬೆಂಗಳೂರಿಗೆ ಕಟ್ಟಡ ನಿರ್ಮಾಣ ವಸ್ತುಗಳನ್ನು ಖರೀದಿಸಲು ಕರುಣಾಸಾಗರ್ ತಮ್ಮ ಆಡಿ ಕಾರಿನಲ್ಲಿ ಬಂದಿದ್ದರು. ಬೆಂಗಳೂರು-ತಮಿಳುನಾಡು ಮಧ್ಯೆ ಬ್ಯುಸಿನೆಸ್ ಸಂಬAಧ ಆಗಾಗ ಬಂದು ಹೋಗುತ್ತಿದ್ದರು. ಅವರು ಬೆಂಗಳೂರಿಗೆ ಬರುವಾಗ ತಮ್ಮ ಭಾವಿ ಪತ್ನಿ ಬಿಂದು ಮತ್ತು ಸ್ನೇಹಿತರನ್ನು ಕರೆದುಕೊಂಡು ಬಂದಿದ್ದರು. ಹಿಂತಿರುಗಿ ಚೆನ್ನೈಗೆ ಹೋಗುವಾಗ ಮಧ್ಯರಾತ್ರಿಯಾಗಿತ್ತು. ಅಪಘಾತದ ಶಬ್ದ ತೀವ್ರವಾಗಿ ಕೇಳಿಬಂದು ಪಕ್ಕದಲ್ಲಿದ್ದ ನಿವಾಸಿಗಳಿಗೆ ಮಧ್ಯರಾತ್ರಿ ಎಚ್ಚರವಾಗಿ ಬಂದು ನೋಡಿದಾಗ ದೃಶ್ಯ ಭೀಕರವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಎತ್ತರದ ಜಿಗಿತದಲ್ಲಿ ಮರಿಯಪ್ಪನ್ ರಜತ ಪದಕ, ಶರದ್‌ಗೆ ಕಂಚು
ಟೋಕಿಯೊ, ಆ. ೩೧: ಟೋಕಿಯೊ ಪ್ಯಾರಾಲಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತ ಸಾಧನೆ ಮಾಡುತ್ತಿದ್ದು, ಮರಿಯಪ್ಪನ್ ತಂಗವೇಲು ಹಾಗೂ ಶರದ್ ಕುಮಾರ್ ಎತ್ತರದ ಜಿಗಿತ (ಹೈ ಜಂಪ್‌ನಲ್ಲಿ) ಅನುಕ್ರಮವಾಗಿ ರಜತ ಪದಕ ಹಾಗೂ ಕಂಚಿನ ಪದಕ ಗೆದ್ದಿದ್ದಾರೆ. ಇಬ್ಬರೂ ಕ್ರೀಡಾಪಟುಗಳು ಕ್ಲಾಸ್ ಟಿ೪೨ಯಲ್ಲಿದ್ದು ಮರಿಯಪ್ಪನ್ ತಂಗವೇಲು ಬೆಳ್ಳಿ ಪದಕ ಗೆದ್ದಿದ್ದಾರೆ. ೨೦೧೬ ರ ರಿಯೋ ಒಲಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಇದು ಅವರ ೨ನೇ ಪದಕವಾಗಿದೆ. ಇದೇ ವೇಳೆ ಶರದ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. ಭಾರತದ ಮತ್ತೋರ್ವ ರಿಯೋ ಪದಕ ವಿಜೇತ ಕ್ರೀಡಾಪಟು ವರುಣ್ ಸಿಂಗ್ ಭಾಟಿ ೧.೭೭ ಮೀಟರ್ ಜಿಗಿಯುವ ಮೂಲಕ ೭ನೇ ಸ್ಥಾನದಲ್ಲಿದ್ದಾರೆ.