ಕಣಿವೆ, ಆ. ೩೧: ಅತಿಯಾಸೆ ಗತಿಕೇಡು ಎಂಬAತೆ ದುರಾಸೆಗೆ ಒಳಗಾದ ಬಹಳಷ್ಟು ರೈತರು ಭಾರೀ ಲಾಭ ಗಳಿಕೆಯ ಕನಸಿನೊಂದಿಗೆ ಶುಂಠಿಯ ಬೆನ್ನು ಹತ್ತಿದ್ದವರು ಅದೇ ಶುಂಠಿಯ ಹೊಲದೊಳಗೆ ಅಂಗಾತ ಬೀಳುವಂತಾಗಿದೆ. ಸಾವಿರಾರು ರೂಗಳಿದ್ದ ಬೆಲೆ ಈಗ ನೂರಕ್ಕೆ ಕುಸಿದಿದೆ. ಭೂಮಿಯೂ ಬಂಜೆ ಯಾಗಿದೆ. ಕೃಷಿಕನ ಜೇಬು ಕೂಡ ಖಾಲಿಯಾಗಿದೆ..!
ಗಗನಕ್ಕೆ ಏರಿದ್ದ ಶುಂಠಿಯ ಬೆಲೆಯಿಂದ ರೈತರ ಮೈ - ಮನಸ್ಸು ತೇಲಾಡಿ ಓಲಾಡಿದ ದಿನಗಳು ಕಣ್ಣಮುಂದಿವೆ. ಶುಂಠಿಗೆ ಬೆಲೆ ಏರಿಕೆಯ ಕೇವಲ ಕೆಲವೇ ವರ್ಷಗಳಲ್ಲಿ ಹಳ್ಳಿಗಳ ಚಿತ್ರಣವೇ ಬದಲಾಗಿತ್ತು. ಆಕಾಶದಲ್ಲಿ ತೇಲುತ್ತಿದ್ದವರು ಇನ್ನೂ ಎತ್ತರಕ್ಕೆ ಏರಲು ಹೋಗಿದ್ದರು. ರಫ್ತು ವಿಚಾರಗಳ ಗುಂಗಿನಲ್ಲೇ ಇದ್ದರು. ಈ ವ್ಯಾಮೋಹ ವಿಪರೀತಕ್ಕೆ ತಿರುಗಿದ್ದೇ ಅಪಾಯಕ್ಕೆ ಸಿಲುಕಿಸಿದೆ. ಕೊರೊನಾ ದಿಂದಾಗಿ ಕಳೆದ ಎರಡು ವರ್ಷ ಗಳಿಂದ ಕುಸಿದಿದ್ದ ಬೆಲೆ ಚೇತರಿಸಿ ಕೊಂಡಿಲ್ಲ. ಶುಂಠಿ ಬೆಳೆದವರ ಸಂಕಷ್ಟದ ಆಲಾಪ ನಿಂತಿಲ್ಲ.
ಶುAಠಿಗೆ ವಾಣಿಜ್ಯ ಬೆಳೆ ಮನ್ನಣೆ ಸಿಕ್ಕಿದ್ದೇ ತಡ ರೈತರ ಒಲವು - ನಿಲುವುಗಳೆಲ್ಲಾ ಬದಲಾದವು. ಅನ್ನ ನೀಡುತ್ತಿದ್ದ ಒಡಲನ್ನು ಅಗೆದು - ಬಗೆದು ಲಾಭಗಳಿಕೆಗೆ ಮುಂದಾದರು. ಮಿತಿ ತಪ್ಪಿದ ಔಷಧಿ ಬಳಕೆ ಆಯಿತು.
ಶೂಲಕ್ಕೆ ತಲೆ ಕೊಟ್ಟು ಸಾಲ ತಂದು ಶುಂಠಿಯ ಹೊಲ ಗದ್ದೆಗಳನ್ನು ಮಡಿ ಮಾಡಿದರು. ಭತ್ತದ ಗದ್ದೆ, ಆಲೂಗಡ್ಡೆ ಹೊಲ, ಕಾಫಿ ತೋಟ ಗಳು, ಊರುಗಳ ಜಾನುವಾರುಗಳು ಮೇಯುತ್ತಿದ್ದ ಬಾಣೆಗಳು, ಗುಡ್ಡಗಳು ಶುಂಠಿಯ ವ್ಯಾಮೋಹದ ಬಲೆಗೆ ಸಿಕ್ಕಿ ಬಿದ್ದು ಲಕ್ಷಗಟ್ಟಲೆ ಖರ್ಚು ಮಾಡಿ ಬೀಜ ಗೊಬ್ಬರ ಸುರಿದು ದುಬಾರಿ ಕೂಲಿ ಕೊಟ್ಟರು. ಅಪ್ಪಟ ಮಲೆನಾಡು ಕೂಡ ಶುಂಠಿಮಯವಾಯಿತು.
ಲಕ್ಷಗಟ್ಟಲೆ ಸುರಿದು ದಿನಬೆಳ ಗಾಗುವ ಹೊತ್ತಿಗೆ ಕೋಟಿಗಟ್ಟಲೆ ಗಳಿಸುವ ಆತುರ ಬಲೆಗೆ ಬೀಳು ವಂತಾಯಿತು. ಬಹಳಷ್ಟು ಮಂದಿ ಅತಿ ಯಾಸೆಗೆ ಬಲಿ ಬಿದ್ದು ಇದ್ದುದೆಲ್ಲವನು ಕಳೆದುಕೊಂಡರು. ಇಲ್ಲದುದನ್ನು ಗಳಿಸುವ ಉತ್ಸಾಹದಲ್ಲಿ ಭೂಮಿ ಬಂಜೆ ಆಯಿತು. ಕಿಸೆಯೂ ಖಾಲಿ ಆಯ್ತು.
ಸಾಂಪ್ರದಾಯಿಕ ಕೃಷಿಗೆ ಬದ್ಧವಾಗಿದ್ದ ಕೊಡಗು, ಹಾಸನದಂತಹ ಮಲೆನಾಡು - ಅರೆ ಮಲೆನಾಡಿನ ಪ್ರದೇಶಗಳು, ಹೆಚ್.ಡಿ. ಕೋಟೆ, ಕೊಳ್ಳೇಗಾಲ, ಬಳ್ಳಾರಿ ಯಂತಹ ಅಪ್ಪಟ ಬಯಲು ಸೀಮೆಗಳು ಶುಂಠಿಯ ಹಿಡಿತಕ್ಕೆ ಸಿಲುಕಿದ್ದವು. ಲಾಭ ಗಳಿಕೆಯ ಭರವಸೆ ಆಸೆ ಹೆಚ್ಚಿಸಿತ್ತು. ೨೦೧೮ - ೧೯ ರಲ್ಲಿ ೬೦ ಕೆ.ಜಿ. ತೂಕದ ಒಂದು ಚೀಲ ಶುಂಠಿಯ ಫಸಲಿಗೆ ಗರಿಷ್ಠ ೫೬೦೦ ರೂಗಳಿಂದ ಕನಿಷ್ಟ ರೂ. ೩೨೦೦ ಇತ್ತು. ಅಷ್ಟೇ ಅಲ್ಲ, ಅವಧಿ ಮೀರಿದ ಹಳೆಯ ಶುಂಠಿಯ ಧಾರಣೆ ೯ ಸಾವಿರ ರೂಗಳವರೆಗೂ ದಾಟಿತ್ತು. ಇದು ಸಹಜವಾಗಿಯೇ ವ್ಯಾಮೋಹಕ್ಕೆ ರೈತರನ್ನು ಬಲಿ ಮಾಡಿತ್ತು.
ಆಗ ಸಾವಿರಗಟ್ಟಲೆ ಇದ್ದ ಶುಂಠಿಯ ಬೆಲೆ ಕಳೆದ ೨೦೨೦ ರಲ್ಲಿ ಕೊರೊನಾದಿಂದಾಗಿ ೧೦೦೦ ರೂ. ಗಳಿಂದ ೧೧೫೦ ರೂ. ಇದ್ದರೆ, ೨೦೨೧ ರಲ್ಲಿ ಪ್ರಸಕ್ತ ಇದೇ ಶುಂಠಿಯ ಧಾರಣೆ ಇದೀಗ ಕೇವಲ ೫೦೦ ರಿಂದ ೫೫೦ ರೂಗಳನ್ನು ದಾಟಲು ತಡಕಾಡುತ್ತಿದೆ. ಇದರಿಂದಾಗಿ ಲಕ್ಷ ಸುರಿದು ಕೋಟಿ ಬಾಚುವ ಲೆಕ್ಕಾಚಾರ ಈಗ ಸಾವಿರದಿಂದ ನೂರಕ್ಕೆ ಇಳಿದಿದ್ದು, ರೈತರ ತಲೆ ತಿರುಗಿ ಬೀಳಿಸಿದೆ. ಬೆಳೆಗಾರರ ಕಿಸೆ ಖಾಲಿಯಾಗಿದೆ.
ಹೊರರಾಜ್ಯದ ದಲ್ಲಾಳಿಗಳ ವ್ಯಾಪಾರ ಬುದ್ಧಿ
ಹೊರರಾಜ್ಯದ ದಲ್ಲಾಳಿಗಳ ವ್ಯಾಪಾರ ಬುದ್ಧಿ ಶುಂಠಿಗೆ ದಾರಿ ಸಲೀಸು ಮಾಡಿತು. ಹೊರದೇಶಗಳಿಗೆ ರಫ್ತು ಮಾಡಿ ಲಾಭ ಗಳಿಕೆಯ ಆಮಿಷ ರೈತರ ದಿಕ್ಕು ತಪ್ಪಿಸಿತು. ಬರಗಾಲದ ನಷ್ಟ ಹಾಗೂ ಬೆಲೆಕುಸಿತದ ಕಷ್ಟದಿಂದ ಬೇಸತ್ತವರು ಶುಂಠಿಗೆ ಒಗ್ಗಿಕೊಂಡರು. ಕಾಫಿಯಿಂದ ಸಿಗದ ಲಾಭ, ಭತ್ತ, ಮೆಣಸಿನಕಾಯಿಗೆ ಇಲ್ಲದ ಬೆಲೆ, ಶುಂಠಿಯತ್ತ ತಿರುಗಿತ್ತು. ಅದರೊಂದಿ ಗಿನ ಸರಸ ಇದೀಗ ರೈತರಿಗೆ ಬೆಂಕಿ ಯೊಂದಿಗೆ ಕಾಲಿಟ್ಟ ಅನುಭವವಾಗಿದೆ. ಈ ಬಾರಿಯಂತೂ ಕುಶಾಲನಗರ, ಪಿರಿಯಾಪಟ್ಟಣ, ಹುಣಸೂರು, ಅರಕಲಗೂಡು, ಸೋಮವಾರಪೇಟೆ, ಹೊಳೆನರಸೀಪುರ ಸೇರಿದಂತೆ ಎಲ್ಲೆಡೆ ಬೆಳೆದಿರುವ ಶುಂಠಿಯ ಫಸಲಿಗೆ ಈ ಬಾರಿ ಕೊಳೆರೋಗ ಹಾಗೂ ಮಹಾ ಕಾಳಿರೋಗ ಹೆಚ್ಚಾಗಿ ಬಾಧಿಸಿದ್ದು, ಇಳುವರಿಯ ಪ್ರಮಾಣವೂ ಕುಂಠಿತಗೊAಡಿದೆ ಎನ್ನಲಾಗುತ್ತಿದೆ.
ಬೆಲೆ ಕುಸಿತಕ್ಕೆ ಕಾರಣಗಳು
ಶುಂಠಿಯ ಬೆಲೆ ಕುಸಿತಕ್ಕೆ ಹತ್ತಾರು ಕಾರಣಗಳಿವೆ. ಅತಿಯಾದ ಲಾಭಗಳಿಕೆಯ ಆಸೆಯಿಂದ ಮಿತಿ ತಪ್ಪಿದ ಬಿತ್ತನೆ ಒಂದೆಡೆಯಾದರೆ, ಅತಿವೃಷ್ಟಿ ಮತ್ತೊಂದೆಡೆ ನಿರಂತರವಾಗಿ ಕಾಡಿತು. ಬಿತ್ತನೆ ಮಾಡಿದ್ದ ಬೆಳೆ ಬಿಡುವಿಲ್ಲದೆ ಸುರಿದ ಮಳೆಯ ಹೊಡೆತದಿಂದ ಚೇತರಿಸಿಕೊಳ್ಳಲಿಲ್ಲ. ಮುಂಗಾರಿಗೆ ಮುಂಚೆ ಬಿತ್ತನೆ ಮಾಡಿ ಗೆಡ್ಡೆ ಒಡೆಯುವ ಹಂತದಲ್ಲಿಯೇ ಮಾರಕ ರೋಗಗಳು ಅಂಟಿ ಕೊಂಡವು. ಕೊಳೆಯ ರೋಗ ಬೆಳೆಯ ಭವಿಷ್ಯವನ್ನೇ ಹಿಂಡಿ ಹಾಕಿದರೆ, ವಿಷಕಾರಿ ಔಷಧ ಭೂಮಿಯ ಸತ್ವ ಹಾಳು ಮಾಡಿತು. ಇಷ್ಟಾದರೂ ಭರಪೂರ ಫಸಲು ಬೇಕು ಎಂಬ ರೈತರ ನಿಲುವು ಬದಲಾಗಲಿಲ್ಲ. ಶುಂಠಿಯಿAದ ಬೆಳೆಗೆ ಮಾತ್ರ ನಷ್ಟವಾಗಿಲ್ಲ. ಶುಂಠಿ ಬೆಳೆದ ಭೂಮಿಯು ಬೆಲೆ ಕಳೆದುಕೊಂಡಿದೆ. ದುಬಾರಿ ಬೆಲೆಯ ಕೂಲಿಗೆ ಆಕರ್ಷಿತರಾಗಿದ್ದ ಕೂಲಿ ಕಾರ್ಮಿಕರ ಧೋರಣೆಯೂ ಬದಲಾಗಿದೆ. ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಆಗ ದಿನಕ್ಕೆ ೧೫೦ ರಿಂದ ೨೦೦ ರೂ. ಕೇಳುತ್ತಿದ್ದವರು ಈಗ ೩೦೦ ರೂ.ಗಳಿಗೆ ಕೂಲಿಯನ್ನು ಹೆಚ್ಚಿಸಿದ್ದಾರೆ. ಇಷ್ಟಾದರೂ ಕೂಲಿಯಾಳುಗಳು ಸಿಗುತ್ತಿಲ್ಲ. ಕೆಲಸವಿದ್ದರು ದುಡಿವ ಕೈಗಳು ಇಲ್ಲದಂತಾಗಿವೆ. ಇದಕ್ಕೆ ಪ್ರತಿಯಾಗಿ ಮದ್ಯದ ಮಾರಾಟದ ಪ್ರಮಾಣವೂ ಶೇಕಡವಾರು ಹೆಚ್ಚಳವಾಗಿದ್ದು, ಸರ್ಕಾರಕ್ಕೆ ಪರೋಕ್ಷವಾಗಿ ಲಾಭ ತಂದು ಕೊಡುತ್ತಿದೆ.
- ಕೆ.ಎಸ್. ಮೂರ್ತಿ