ಮಡಿಕೇರಿ, ಆ. ೩೦: ‘‘ನಾಡು ತರಕಾರಿ - ಕಾಡು ಹಣ್ಣುಗಳು.., ಕಣಿಲೆ, ಮಾವು, ಕೆಸ, ತೆರಮೆ ಸೊಪ್ಪು, ಹಲಸು.., ಹಣ್ಣು - ಹಂಪಲು ಹೀಗೆ... ಇನ್ನಿತರ ವಸ್ತುಗಳಿಗಾಗಿ ಇನ್ನು ಮುಂದಕ್ಕೆ ಅಲ್ಲಲ್ಲಿ ಹುಡುಕಿಕೊಂಡು ಹೋಗಬೇಕಾಗಿಲ್ಲ., ಇನ್ನು ಮುಂದಕ್ಕೆ ಬೀದಿ ಬದಿಯಲ್ಲಿ ಸಿಗುವ ಸಾಮಗ್ರಿಗಳು ಒಂದೇ ಕಡೆಯಲ್ಲಿ ಲಭ್ಯವಿರಲಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಮಡಿಕೇರಿಯಲ್ಲಿ ಒಂದೇ ಕಡೆಯಲ್ಲಿ ಜಾಗದ ವ್ಯವಸ್ಥೆ ಮಾಡಲಾಗುತ್ತಿದೆ. ಇದರೊಂದಿಗೆ ಲಾರಿ ಹಾಗೂ ಗೂಡ್ಸ್ ಟೆಂಪೋ ವಾಹನಗಳಿಗೂ ಒಂದೇ ಕಡೆಯಲ್ಲಿ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.’
ನಗರ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ವಹಿವಾಟು ಮಾಡುವದರಿಂದ ಹಾಗೂ ಪಾದಚಾರಿ ಮಾರ್ಗಗಳಲ್ಲಿ ರಸ್ತೆ ಬದಿಯಲ್ಲಿ ವಾಹನ ನಿಲುಗಡೆ ಮಾಡುತ್ತಿರುವದರಿಂದ ಸಾರ್ವಜನಿಕರಿಗೆ ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಖಾಸಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವದನ್ನು ಗಂಭೀರವಾಗಿ ಪರಿಗಣಿಸಿರುವ ಉಚ್ಚ ನ್ಯಾಯಾಲಯ ಈ ಸಂಬAಧ ಸ್ಥಳೀಯ ಆಡಳಿತದ ಮೂಲಕ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ. ಕಳೆದ ಏಪ್ರಿಲ್ ೨೧ ರಂದು ನೀಡಿರುವ ಆದೇಶದಲ್ಲಿ ಪಾದಚಾರಿ ರಸ್ತೆಯನ್ನು ಅತಿಕ್ರಮಿಸಿಕೊಳ್ಳುವ ಮೂಲಕ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡುವದು, ಪಾದಚಾರಿ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ಮಾಡುವದು, ಅಕ್ರಮ ಮತ್ತು ಕಾನೂನು ಬಾಹಿರ ಹಾಗೂ ಸಂವಿಧಾನದ ಕಲಂ ೨೧ರ ಪ್ರಕಾರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಸಾರ್ವಜನಿಕರು ಸಂಚಾರಕ್ಕೆ ಅಡ್ಡಿಯಾಗುವಂತೆ ಪಾರ್ಕಿಂಗ್ ಮಾಡಿ ನಿಯಮ ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಮೋಟಾರು ವಾಹನ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯಡಿ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ.
ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆ ವತಿಯಿಂದ ನಗರಸಭೆÀಗೆ ಈ ಸಂಬAಧ ವಾಹನ ನಿಲುಗಡೆ ಹಾಗೂ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಜಾಗ ಗುರುತಿಸುವಂತೆ ಪತ್ರ ಮುಖೇನ ತಿಳಿಸಲಾಗಿತ್ತು. ಈ ಸಂಬAಧ ನಗರ ಪೊಲೀಸ್ ಠಾಣಾಧಿಕಾರಿ ಅಂತಿಮಗೌಡ, ನಗರಸಭಾ ಆಯುಕ್ತ ರಾಮ್‌ದಾಸ್ ಹಾಗೂ ಅಭಿಯಂತರರು ಸ್ಥಳ ಪರಿಶೀಲನೆ ನಡೆಸಿದರು.
ರೇಸ್‌ಕೋರ್ಸ್ ರಸ್ತೆಯಲ್ಲಿ ಜಾಗ
ನಗರ ವ್ಯಾಪ್ತಿಯ ರೇಸ್‌ಕೋರ್ಸ್ ರಸ್ತೆ ಬದಿ (ಇಂದಿರಾ ಕ್ಯಾಂಟೀನ್ ಎದುರು) ಸಾಯಿ ಕ್ರೀಡಾ ವಸತಿ ಶಾಲೆವರೆಗೆ (ತೋಡಿನ ಬದಿ) ಜಾಗ ಗುರುತಿಸಿ ಪರಿಶೀಲಿಸಲಾಯಿತು. ತೋಡಿನ ಬದಿಗೆ ತಡೆಗೋಡೆ ನಿರ್ಮಾಣದೊಂದಿಗೆ ನೂತನ ಕಾಂಕ್ರಿಟ್ ರಸ್ತೆ ಬದಿಯಿಂದ ಲಭ್ಯವಿರುವ ಜಾಗದಲ್ಲಿ ಇಂಟರ್‌ಲಾಕ್ ಅಳವಡಿಸುವದರೊಂದಿಗೆ ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ ಒಂದೇ ಕಡೆಯಲ್ಲಿ ಅವಕಾಶ ಕಲ್ಪಿಸಿಕೊಡುವ ಬಗ್ಗೆ ತೀರ್ಮಾನಿಸಲಾಗಿದೆ.