ನಾಪೋಕ್ಲು, ಆ. ೩೦: ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಇನ್ನೂ ಹತೋಟಿಗೆ ಬಂದAತೆ ಕಾಣುತ್ತಿಲ್ಲ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ನಾಪೋಕ್ಲುವಿನಲ್ಲಿ ತಾ. ೨೭ರಂದು ೭ ೨೮ರಂದು ೩ ಹಾಗೂ ೨೯ರಂದು ೩ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಕೊರೊನಾ ನಿಯಂತ್ರಣಕ್ಕೆ ನಾಪೋಕ್ಲು ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಅವಿರತವಾಗಿ ಶ್ರಮಿಸಿದರೂ, ಕೊರೊನಾ ಹತೋಟಿಗೆ ಬಾರದಿರುವದು ಆತಂಕ ಮೂಡಿಸಿದೆ.
ನಾಪೋಕ್ಲು ಪಟ್ಟಣವನ್ನು ಸುತ್ತಮುತ್ತಲಿನ ೨೭ ಗ್ರಾಮಗಳ ಜನ ಆಶ್ರಯಿಸಿದ್ದಾರೆ. ಸಂತೆ ದಿನವಾದ ಸೋಮವಾರ ಎಲ್ಲರೂ ಇಲ್ಲಿಗೆ ಆಗಮಿಸುವುದರಿಂದ ಹೆಚ್ಚಿನ ಜನ ದಟ್ಟಣೆ ಉಂಟಾಗುತ್ತಿದೆ. ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಾಸ್ಕ್ ಸರಿಯಾಗಿ ಧರಿಸದೇ ಓಡಾಡುತ್ತಿರುವದು ಕಂಡು ಬರುತ್ತಿದೆ. ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಆದರೆ, ಅವರು ಹೇಳಿರುವದು ನಮಗಲ್ಲ ಎನ್ನುವಂತೆ ಜನ ವರ್ತಿಸುತ್ತಿರುವದು ಗೋಚರಿಸುತ್ತಿದೆ.
ಮಾಸ್ಕ್ ಹಾಕದ ಸಾರ್ವಜನಿಕರಿಗೆ ದಂಡ ವಿಧಿಸಿ ಪ್ರತೀ ಅಂಗಡಿಗೂ ತೆರಳಿ ಕೋವಿಡ್ ನೆಗೆಟಿವ್ ರಿಪೋರ್ಟ್ ಮತ್ತು ಲಸಿಕೆ ಪಡೆದ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಪಂಚಾಯಿತಿ ಉಪಾಧ್ಯಕ್ಷ ಮಹಮ್ಮದ್ ಖುರೇಶಿ, ಸದಸ್ಯ ಸಾಬಾ ತಿಮ್ಮಯ್ಯ ಸಹಕಾರ ನೀಡಿದರು.
ನಾಪೋಕ್ಲು ಪಟ್ಟಣಕ್ಕೆ ಹೆಚ್ಚಿನ ಮಂದಿ ಕಾರ್ಮಿಕರು ಆಗಮಿಸುತ್ತಾರೆ. ಸೋಮವಾರ ಸಂತೆ ದಿನವಾಗಿರುವ ಕಾರಣ ಸಾಮಾನು ಖರೀದಿಗೆ ಮನೆಯಲ್ಲಿರುವ ಮಕ್ಕಳು, ವೃದ್ಧರು ಕೂಡ ಬರುತ್ತಾರೆ. ಸಾರಿಗೆ ಹಾಗೂ ಖಾಸಗಿ ಬಸ್ಗಳ ಸಂಚಾರ ಕಡಿಮೆಯಿರುವ ಕಾರಣ ಸಾಮಗ್ರಿ ಖರೀದಿಸಿದ ಕೂಡಲೇ ವಾಪಾಸು ತೆರಳಲು ಸಾಧ್ಯವಾಗದೇ ಖಾಸಗಿ ವಾಹನ, ಆಟೋ ರಿಕ್ಷಾಗಳಿಗೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿಯೂ ಉಂಟಾಗಿದೆ. ಹೆಚ್ಚಿನ ಕಾರ್ಮಿಕರು ಅಸ್ಸಾಂ ಮೂಲದ ವರಾಗಿದ್ದು, ಕೊರೊನಾ ಜಾಗೃತಿಗೆ ಸಂಬAಧಿಸಿದ ಯಾವದೇ ಸೂಚನೆಗಳನ್ನು ಅವರು ಪಾಲಿಸದೇ ಉಡಾಫೆಯಿಂದ ವರ್ತಿಸುತ್ತಾರೆ ಎಂದು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ದೂರಿದ್ದಾರೆ.
ಅಧಿಕಾರಿಗಳೊಂದಿಗೆ, ಕೊರೊನಾ ವಾರಿಯರ್ಸ್ ಗಳೊಂದಿಗೆ ಸಾರ್ವಜನಿಕರು ಸಂಪೂರ್ಣವಾಗಿ ಸಹಕರಿಸಿದರೆ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯವಾಗಲಿದೆ ಎಂದು ನಾಪೋಕ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ತಿಳಿಸಿದ್ದಾರೆ.