ಕರಿಕೆ,ಆ. ೨೮: ನೆರೆಯ ಕೇರಳದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದೆ ದಿನೇ ದಿನೇ ವ್ಯಾಪಕವಾಗಿ ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ರಾಜ್ಯದ ಗಡಿ ಕರಿಕೆ ಚೆಂಬೇರಿ ಚೆಕ್‌ಪೋಸ್ಟ್ನಲ್ಲಿ ಪೊಲೀಸ್ ಕಣ್ಗಾವಲು ಇನ್ನಷ್ಟೂ ಚುರುಕುಗೊಳಿಸಲಾಗಿದೆ. ಇಂದು ಭಾಗಮಂಡಲ- ಠಾಣಾಧಿಕಾರಿ ಮಹದೇವಯ್ಯನವರು ಗಡಿ ಚೆಕ್‌ಪೋಸ್ಟ್ನಲ್ಲಿ ತಪಾಸಣೆ ನಡೆಸಿ ಗ್ರಾಮಸ್ಥರು ಅನಗತ್ಯವಾಗಿ ತಿರುಗಾಡದಂತೆ ಸೂಚನೆ ನೀಡಿದರು.

ನಿನ್ನೆ ದಿನ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಇಂದು ಇನ್ನಷ್ಟು ಬಿಗಿ ಭದ್ರತೆ ಕಂಡುಬAದಿತು. ಕೋವಿಡ್ ನಿರೋಧಕ ಲಸಿಕೆಯ ಎರಡು ಡೋಸ್ ಹಾಗೂ ನೆಗೆಟಿವ್ ವರದಿ ಹೊಂದಿದವರನ್ನು ಮಾತ್ರ ಜಿಲ್ಲೆಗೆ ಅವಕಾಶ ಕಲ್ಪಿಸಲಾಯಿತು. ಕರಿಕೆ ಭಾಗದ ಎಂಟು ಕಿ.ಮಿ. ವ್ಯಾಪ್ತಿಯಲ್ಲಿನ ಜನರು ಕೇರಳಕ್ಕೆ ಹಾಲು, ಔಷಧ ಖರೀದಿ ಸೇರಿದಂತೆ ತುರ್ತು ಅಗತ್ಯಕ್ಕೆ ಹೋಗಬೇಕಾಗಿದ್ದು ಲಸಿಕೆ ಹಾಗೂ ನೆಗೆಟಿವ್ ವರದಿ ಇದ್ದರೆ ಅದಕ್ಕೆ ನಿಯಮಾನುಸಾರ ಅವಕಾಶ ಕಲ್ಪಿಸಲಾಗಿದೆ. ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಿರುವುದರಿಂದ ಗಡಿಭಾಗವಾದ ಕರಿಕೆಯಲ್ಲಿ ಸಾರ್ವಜನಿಕರು ಹೆಚ್ಚಿನ ಜಾಗರೂಕತೆ ವಹಿಸುವುದರೊಂದಿಗೆ ಕೋವಿಡ್ ಸುರಕ್ಷತಾ ನಿಯಮ ಪಾಲಿಸುವದಲ್ಲದೆ, ಲಸಿಕೆಯನ್ನು ಆದಷ್ಟು ಬೇಗ ಪಡೆಯಲು ಜನತೆ ಸಹಕರಿಸುವಂತೆ ಠಾಣಾಧಿಕಾರಿ ಮಹದೇವ್ ಮನವಿ ಮಾಡಿದ್ದಾರೆ.

- ಸುಧೀರ್ ಹೊದ್ದೆಟ್ಟಿ