ಚೆಟ್ಟಳ್ಳಿ, ಆ. ೨೮: ಕೊಡಗಿನ ವಿವಿಧೆಡೆ ಅರೇಬಿಕಾ ಕಾಫಿಯು ಹಣ್ಣಾಗತೊಡಗಿದ್ದು, ಮಳೆಯ ನಡುವೆ ಕೊಯಿಲು ಮಾಡಲಾಗದೆ ಬೆಳೆಗಾರರು ಪರಿತಪಿಸುವ ಪರಿಸ್ಥಿತಿ ಕಂಡುಬರುತ್ತಿದೆ.
ಈ ವರ್ಷ ಜನವರಿ ತಿಂಗಳಲ್ಲೇ ಮಳೆಯಾದ ಪರಿಣಾಮ ಅರೇಬಿಕಾ ಗಿಡಗಳಲ್ಲಿ ಹೂ ಬಿಟ್ಟಿತ್ತು. ನಂತರ ಫೆಬ್ರವರಿ ತಿಂಗಳಲ್ಲಿ ಎರಡನೇ ಹಂತದ ಮಳೆಗೆ ಹೂವಾಗಿ ಮಾರ್ಚ್ ತಿಂಗಳಲ್ಲೂ ಸುರಿದ ಮಳೆಗೆ ಮೂರನೆ ಬಾರಿ ಹೂವಾದ ಪರಿಣಾಮ ಮೂರು ಹಂತದಲ್ಲಿ ಅರೇಬಿಕಾ ಕಾಯಿಯಾದವು. ಪ್ರತಿ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಅರೇಬಿಕಾ ಕೊಯಿಲಿಗೆೆ ಬರುತ್ತಿದ್ದು ಈ ವರ್ಷ ಜನವರಿಯ ಅಕಾಲಿಕ ಮಳೆಯಿಂದಾಗಿ ಕಾಫಿ ಹಣ್ಣಾಗಿದೆ.
ಅರೇಬಿಕಾ ಗಿಡಗಳಲ್ಲಿ ಸಂಪೂರ್ಣವಾಗಿ ಹಣ್ಣಾಗದೆ ಮಧ್ಯಮಧ್ಯ ಹಣ್ಣಾಗುತ್ತಿರುವುದರಿಂದ ಕಾಯಿಗಳ ನಡುವೆ ಹಣ್ಣನ್ನು ಬೇರ್ಪಡಿಸುವುದೇ ಕಷ್ಟ. ಬೇರ್ಪಡಿಸಿದರೂ ಹಣ್ಣಿಗಿಂತ ಕೂಲಿದರವೇ ದುಪ್ಪಟ್ಟಾಗುತದೆಂಬದು ಬೆಳೆಗಾರರ ಅಳಲು. ಹಣ್ಣುಗಳನ್ನು ಕುಯಿಲು ಮಾಡಿದರೂ ಮಳೆಸುರಿಯುತ್ತಿರುವುದರಿಂದ ಒಣಗಿಸಲು ಸಾಧ್ಯವಾಗದೆ ಅರೇಬಿಕಾ ಬೆಳೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ
(ಮೊದಲ ಪುಟದಿಂದ) ಅರೇಬಿಕಾ ಗಿಡಗಳಲ್ಲಿ ಕೊಳೆರೋಗದ ಜೊತೆಗೆ ಕಾಯಿಗಳು ಉದುರತೊಡಗಿವೆ. ಜೊತೆಗೆ ಇದನ್ನು ಕಾಡುವ ಬಿಳಿಕಾಂಡಕೊರಕ ರೋಗ, ಎಲೆತುಕ್ಕು ರೋಗವನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕಾಫಿ ಮಂಡಳಿ ಮಾರ್ಗಸೂಚಿಯನ್ನು ನೀಡಿದರೂ ಬೆಳೆಗಾರರಿಗೆ ನಿಯಂತ್ರಿಸಲು ಸಾಧ್ಯವಾಗದೆ ಅರೇಬಿಕಾ ಬೆಳೆಯ ಬಗ್ಗೆ ಹೆಚ್ಚಿನ ಒತ್ತು ನೀಡದೆ ರೋಬಸ್ಟಾ ಗಿಡನೆಡ ತೊಡಗಿದ್ದಾರೆ.
ಮಾಲ್ದಾರೆಯ ಕಾಫಿತೋಟದಲ್ಲಿ ಅರೇಬಿಕಾ ಕಾಫಿಗಿಡಗಳನ್ನು ಬೆಳೆಸಿ ಮಳೆಯ ನಡುವೆ ಹಣ್ಣಾದ ಕಾಫಿ ಕುಯಿಲು ಮಾಡಿ ಒಣಗಿಸಲಾಗದೆ ಬೇಸತ್ತು ಕಳೆದಬಾರಿ ಅರೇಬಿಕಾ ಗಿಡವನ್ನೆಲ್ಲ ಕಡಿದು ರೋಬಸ್ಟಾ ಕಾಫಿ ಗಿಡಗಳನ್ನು ನೆಟ್ಟು ಬೆಳೆಸುತ್ತಿರುವುದಾಗಿ ಚೆಟ್ಟಳ್ಳಿ ಕಾಫಿ ಬೆಳೆಗಾರ ಕೊಳಂಬೆ ಸುಬ್ಬಯ್ಯ ಹೇಳುತ್ತಾರೆ. ಹೀಗೆ ಹಲವು ಅರೇಬಿಕಾ ಬೆಳೆಗಾರರು ರೋಬಸ್ಟಾ ಕಾಫಿ ತೋಟವನ್ನಾಗಿ ಮಾರ್ಪಡಿಸಿದ್ದಾರೆ.
ಈ ಬಾರಿ ಜನವರಿಯಲ್ಲೇ ಮಳೆ ಬಂದಿರುವುದರಿAದ ಅರೆಬಿಕಾ ಹಣ್ಣುಗಳು ಬಲಿತು ಕೆಲವೊಂದು ಗಿಡಗಳಲ್ಲಿ ಹಣ್ಣಾಗುತ್ತಿರುವುದು ಕಂಡುಬರುತ್ತಿದೆ. ಹವಾಮಾನದ ವೈಪರಿತ್ಯದಿಂದ ಈ ರೀತಿಯಾಗುತ್ತಿದೆ ಎಂದು ಮಡಿಕೇರಿ ಕಾಫಿ ಮಂಡಳಿಯ ಉಪನಿರ್ದೇಶಕರು (ವಿಸ್ತರಣೆ) ಶಿವಕುಮಾರ್‌ಸ್ವಾಮಿ ಮಾಹಿತಿ ನೀಡಿದ್ದಾರೆ. -ಪುತ್ತರಿರ ಕರುಣ್‌ಕಾಳಯ್ಯ