ಸೋಮವಾರಪೇಟೆ, ಆ.೨೭: ಮುಂಗಾರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ತಾಲೂಕಿನಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆಹಾನಿಯಾಗಿದ್ದು, ತಾಲೂಕನ್ನು ಅತಿವೃಷ್ಟಿ ಪೀಡಿತ ಎಂದು ಸರಕಾರ ಘೋಷಿಸಬೇಕೆಂದು ತಾಲೂಕು ಕೃಷಿಕರ ಸಮಾಜ ಆಗ್ರಹಿಸಿ, ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದೆ.
ತಾಲೂಕಿನ ಶಾಂತಳ್ಳಿ, ಸುಂಠಿಕೊಪ್ಪ, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ, ಕುಶಾಲನಗರ ಹೋಬಳಿಯಲ್ಲಿ ಫಸಲು ನಷ್ಟವಾಗಿದೆ. ಕಾಳುಮೆಣಸು ಶೇ.೯೦ರಷ್ಟು ಹಾನಿಯಾಗಿದೆ. ಕಾಫಿ ತೋಟಗಳು ರೋಗಪೀಡಿತವಾಗಿವೆ. ಶಾಂತಳ್ಳಿ ಹೋಬಳಿ ಹಾಗೂ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊಳೆರೋಗದಿಂದ ಕಾಫಿ ಫಸಲು ಮಣ್ಣು ಸೇರಿದೆ ಎಂದು ಕೃಷಿಕ ಸಮಾಜದ ಅಧ್ಯಕ್ಷ ತಾಕೇರಿ ಪೊನ್ನಪ್ಪ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಏಲಕ್ಕಿ, ಭತ್ತ, ಬಾಳೆ, ಶುಂಠಿ ಕೃಷಿಯೂ ಹಾಳಾಗಿದೆ. ಕೃಷಿಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕೂಡಲೆ ಜಿಲ್ಲಾಡಳಿತ, ಕೃಷಿ, ತೋಟಗಾರಿಕೆ ಬೆಳೆ ಹಾಗೂ ಕಾಫಿ ಫಸಲು ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಿ, ಸೂಕ್ತ ಕ್ರಮ ಜರುಗಿಸಬೇಕು. ಫಸಲು ಹಾನಿಗೆ ಸೂಕ್ತ ಪರಿಹಾರ ಸಿಗಬೇಕು ಎಂದು ಒತ್ತಾಯಿಸಿದ್ದಾರೆ. ಈಗಾಗಲೇ ಗರ್ವಾಲೆ, ಕಿರಗಂದೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅತಿವೃಷ್ಟಿ ಪೀಡಿತ ತಾಲೂಕು ಎಂದು ಘೋಷಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಮನವಿ ಸಲ್ಲಿಸುವ ಸಂದರ್ಭ ಗರ್ವಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಂಜುAಡ, ಕಿರಗಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಕೆ.ರಘು, ಕೃಷಿಕರಾದ ಚಂಗಪ್ಪ, ಸಚಿನ್, ಮಸಗೋಡು ಸತೀಶ್ , ಶಾಂತಳ್ಳಿ ಪ್ರತಾಪ್, ತೋಳೂರುಶೆಟ್ಟಳ್ಳಿ ರಜಿತ್, ನವೀನ್ ಇದ್ದರು.