ವೀರಾಜಪೇಟೆ, ಆ. ೨೭: ಕೊಡಗಿನ ಸಮಸ್ಯೆಗಳನ್ನು ಅರಿತು ಕೆಲಸ ಮಾಡುವ ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ರೈತ ಸಂಘ ಆಗ್ರಹಿಸಿದೆ.
ರಾಜ್ಯ ಸರಕಾರದ ಸಚಿವ ಸಂಪುಟದಲ್ಲಿ ಕೊಡಗಿಗೆ ಸಚಿವ ಪದವಿ ದೊರೆತ್ತಿಲ್ಲ. ಜಿಲ್ಲೆಯ ಶಾಸಕರು ಉಸ್ತುವಾರಿ ಸಚಿವರಾದರೆ ಮಾತ್ರ ಇಲ್ಲಿನ ಸಮಸ್ಯೆ ಬಗೆಹರಿಸಲು ಸಾಧ್ಯ. ಆದರಿಂದ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಾಡಿಚಂಡ ಗಣಪತಿ ವೀರಾಜಪೇಟೆಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿವೆ. ಜಿಲ್ಲೆಗೆ ಸಚಿವ ಸ್ಥಾನ ದೊರಕಿದರೆ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಕಾಂಗ್ರೆಸ್ ಸರಕಾರ ಈ ಹಿಂದೆ ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ನೀಡಿದೆ. ನಿರಂತರವಾಗಿ ಬಿಜೆಪಿಯನ್ನು ಬೆಂಬಲಿಸುವ ಕೊಡಗಿಗೆ ಮಲತಾಯಿ ಧೋರಣೆ ಅನುಸರಿಸಲು ಕಾರಣವೇನೂ ಎಂದು ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಮನೆಯಪಂಡ ಪೊನ್ನಪ್ಪ, ಕಾರ್ಯಾಧ್ಯಕ್ಷ ಕೇಚಂಡ ಕುಶಾಲಪ್ಪ, ಖಜಾಂಜಿ ಪಟ್ಟಡ ಅರುಣ್ ಮತ್ತು ಜಂಟಿ ಕಾರ್ಯದರ್ಶಿ ಪಳೆಯತಂಡ ಹರಿ ಉಪಸ್ಥಿತರಿದ್ದರು.