ಕೂಡಿಗೆ, ಆ. ೨೬: ಟಾಟಾ ಕಾಫಿ ಲಿಮಿಟೆಡ್ ಪಾಲಿಬೆಟ್ಟ ಮತ್ತು ಆರ್.ಐ.ಹೆಚ್.ಪಿ. ಆಸ್ಪತ್ರೆ, ಅಮ್ಮತ್ತಿ ಇವರ ಸಹಯೋಗದಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿನ ಪುನರ್ವಸತಿ ಕೇಂದ್ರದಲ್ಲಿ ಉಚಿತ ವೈದ್ಯಕೀಯ ತಪಾಸಣೆಯ ಶಿಬಿರವು ನಡೆಯಿತು.

ಕಾರ್ಯಕ್ರಮ ಉದ್ಘಾಟನೆಯನ್ನು ಕುಶಾಲನಗರ ವರ್ಕ್ಸ್ನ ಹಿರಿಯ ಜನರಲ್ ಮ್ಯಾನೇಜರ್ ವಿವೇಕ್ ಅಯ್ಯಣ್ಣ ನೆರವೇರಿಸಿ ಮಾತನಾಡಿ, ಸಂಸ್ಥೆಯು ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗ ನೀಡುವ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಪೂರಕವಾಗುವ ಕೆಲಸಗಳನ್ನು ಕೈಗೊಳ್ಳಲು ಸದಾ ಸಿದ್ಧವಿರುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕೂಡಿಗೆ ಗ್ರಾಮ ಪಂಚಾಯಿತಿ ಆ ಸದಸ್ಯ ಟಿ.ಪಿ. ಹಮೀದ್ ಮಾತನಾಡಿ, ಗ್ರಾಮಾಂತರ ಪ್ರದೇಶದ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ ತಪಾಸಣೆಗೆ ಮುಂದಾಗಿರುವುದು ಉತ್ತಮವಾದ ಕೆಲಸವಾಗಿದೆ. ಇದೆ ರೀತಿಯಲ್ಲಿ ಟಾಟಾ ಕಾಫಿ ಲಿಮಿಟೆಡ್ ನವರು ಶಿಕ್ಷಣಕ್ಕೂ ಹೆಚ್ಚು ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಶಾಲನಗರ ವರ್ಕ್ಸ್ನ ವಿಭಾಗೀಯ ಜನರಲ್ ಮ್ಯಾನೇಜರ್ ಕಾರ್ತಿಕ್, ಸಹಾಯಕ ಮ್ಯಾನೇಜರ್ ಎಂ.ಎA. ಮಾದಣ್ಣ, ಆರ್ದಶ್ ಪೂವಯ್ಯ, ಪೊನ್ನಪ್ಪ, ಡಾ. ದಿವ್ಯ, ಸುಂದಕರ್ ಕೃಷ್ಣ ಪ್ರಸಾದ್, ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ, ಸದಸ್ಯೆ ಜಯಶ್ರೀ, ಆರೋಗ್ಯ ಅಧಿಕಾರಿಗಳಾದ ಕಾವ್ಯ, ವಿದ್ಯಾ ಸೇರಿದಂತೆ ಪುನರ್ವಸತಿ ಕೇಂದ್ರದ ಮುಖಂಡರಾದ ಅಪ್ಪು ಮುತ್ತ ಮೀಸೆ ಮುತ್ತ ಇದ್ದರು.

ತಪಾಸಣೆಯಲ್ಲಿ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದ ಮಕ್ಕಳು, ಪುರುಷರು, ಮಹಿಳೆಯರು ಸೇರಿದಂತೆ ೧೬೭ ಮಂದಿ ಪಾಲ್ಗೊಂಡು ಉಚಿತವಾಗಿ ಔಷಧಿಗಳನ್ನು ಪಡೆದುಕೊಂಡರು.