ಸೋಮವಾರಪೇಟೆ, ಆ. ೨೪: ಮುಂದಿನ ಸಚಿವ ಸಂಪುಟ ವಿಸ್ತರಣೆ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ಒದಗಿಸಬೇಕೆಂದು ಇಲ್ಲಿನ ವೀರಶೈವ ಸಮಾಜ, ಅಕ್ಕನ ಬಳಗ ಹಾಗೂ ಬಸವೇಶ್ವರ ಯುವಕ ಸಂಘ ಆಗ್ರಹಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೀರಶೈವ ಸಮಾಜದ ಕಾರ್ಯದರ್ಶಿ ಜೆ.ಸಿ. ಶೇಖರ್ ಅವರು, ಜಿಲ್ಲೆಯಿಂದ ೫ ಬಾರಿ ಶಾಸಕರಾಗಿರುವ ರಂಜನ್ ಅವರಿಗೆ ಈ ಬಾರಿಯೇ ಸಚಿವ ಸ್ಥಾನ ಲಭಿಸುವ ನಿರೀಕ್ಷೆಯಿತ್ತು. ಪ್ರತಿ ಬಾರಿಯೂ ರಂಜನ್ ಅವರು ಅವಕಾಶದಿಂದ ವಂಚಿತರಾಗುತ್ತಿದ್ದು, ಜಿಲ್ಲೆಯನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಎಂದರು. ಕೋವಿಡ್ ಸಂದರ್ಭ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಖುದ್ದು ಭೇಟಿ ನೀಡಿ ೨೦ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಕಿಟ್‌ಗಳನ್ನು ವಿತರಿಸಿದ್ದಾರೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಇನ್ನಷ್ಟು ಅಭಿವೃದ್ಧಿಯೊಂದಿಗೆ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲು ರಂಜನ್ ಅವರಿಗೆ ಸ್ಥಾನ ಕಲ್ಪಿಸಬೇಕೆಂದು ಒತ್ತಾಯಿಸಿದರು. ಸಾಮಾಜಿಕ, ಶಿಕ್ಷಣ, ಕೃಷಿ, ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿರುವ ಅಪ್ಪಚ್ಚುರಂಜನ್ ಅವರಿಗೆ ಸಚಿವ ಸ್ಥಾನ ತಪ್ಪಿರುವುದು ಜಿಲ್ಲೆಯ ದುರಂತ. ಈ ಅನ್ಯಾಯವನ್ನು ಮುಂದಿನ ವಿಸ್ತರಣೆಯಲ್ಲಿ ಸರಿಪಡಿಸಬೇಕೆಂದು ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್ ಒತ್ತಾಯಿಸಿದರು. ಗೋಷ್ಠಿಯಲ್ಲಿ ಬಸವೇಶ್ವರ ಯುವಕ ಸಂಘದ ಮಾಜೀ ಅಧ್ಯಕ್ಷ ಡಿಎಸ್. ಗುರುಪ್ರಸಾದ್, ಸಮಾಜದ ನಿರ್ದೇಶಕ ಎಸ್.ವಿ. ಸಚಿನ್ ಅವರುಗಳು ಉಪಸ್ಥಿತರಿದ್ದರು.