ಮಡಿಕೇರಿ, ಆ.೨೩ : ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಅಧ್ಯಕ್ಷರಾಗಿ ಬಿ.ಬಿ.ಐತ್ತಪ್ಪ ರೈ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಜಿಲ್ಲಾ, ತಾಲೂಕು, ಹೋಬಳಿ ಮತ್ತು ಗ್ರಾಮ ಸಮಿತಿ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಉಳಿದ ಪದಾಧಿಕಾರಿಗಳನ್ನು ಮುಂದಿನ ಸಭೆಯಲ್ಲಿ ನೇಮಕ ಮಾಡಲು ನಿರ್ಧಾರ ಕೈಗೊಳ್ಳಲಾಯಿತು.

ನೂತನ ಅಧ್ಯಕ್ಷ ಐತ್ತಪ್ಪ ರೈ ಮಾತನಾಡಿ ತುಳು ಭಾಷಿಕರನ್ನು ಸಂಘಟಿಸುವ ವಿಶ್ವಾಸ ವ್ಯಕ್ತಪಡಿಸಿದರು. ಪ್ರಮುಖರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ೧.೫೦ ಲಕ್ಷಕ್ಕೂ ಅಧಿಕ ಮಂದಿ ತುಳು ಭಾಷಿಕರಿದ್ದು, ಪ್ರತಿ ಗ್ರಾಮ ಮಟ್ಟದಲ್ಲಿ ಸಮಿತಿಗಳು ರಚನೆಯಾಗಬೇಕು. ತುಳು ಭಾಷೆ ಮಾತನಾಡುವ ೧೩ ಸಮುದಾಯದ ಪ್ರಮುಖರಿಗೂ ಸಮಿತಿಯಲ್ಲಿ ಸ್ಥಾನ ನೀಡಬೇಕೆಂದು ಸಲಹೆ ನೀಡಿದರು. ನಿಕಟಪೂರ್ವ ಅಧ್ಯಕ್ಷ ಶೇಖರ್ ಭಂಡಾರಿ, ಹಿರಿಯ ಸಲಹೆಗಾರ ಬಾಲಕೃಷ್ಣ ರೈ, ಸ್ಥಾಪಕ ಕಾರ್ಯದರ್ಶಿ ಹರೀಶ್ ಆಳ್ವ, ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ, ಜಿ.ಪಂ ಮಾಜಿ ಅಧ್ಯಕ್ಷ ಬಿ.ಶಿವಪ್ಪ, ಪ್ರಮುಖರಾದ ಬಿ.ವೈ.ಆನಂದ ರಘು, ಪ್ರಭು ರೈ, ನಾರಾಯಣ ರೈ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.