ಸೋಮವಾರಪೇಟೆ, ಆ.೨೩: ಜಮ್ಮಾ ಹಿಡುವಳಿ ಹಾಗೂ ಕೂರ್ಗ್ ಬೈ ರೇಸ್ ಮೂಲಕ ಕೋವಿ ಹಕ್ಕು ಹೊಂದಿರುವುದನ್ನು ಪ್ರಶ್ನಿಸಿ ಚೇತನ್ ಎಂಬವರು ಹೈಕೋರ್ಟ್ನಲ್ಲಿ ರಿಟ್ ಪಿಟಿಷನ್ ಹಾಕಿರುವ ಬಗ್ಗೆ ಗಂಭೀರ ಚರ್ಚೆ ನಡೆಸಿದ ಗೌಡ ಸಮುದಾಯ ದವರು, ಈ ವ್ಯಾಜ್ಯದಲ್ಲಿ ತಮ್ಮನ್ನೂ ಸೇರ್ಪಡೆಗೊಳಿಸಬೇಕೆಂದು ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಇಂದು ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಗೌಡ ಸಮುದಾಯದ ಜಮ್ಮಾ ಹಿಡುವಳಿ ದಾರರು, ಅಂತಿಮವಾಗಿ ತಮ್ಮನ್ನೂ ಸಹ ಈ ಪ್ರಕರಣದಲ್ಲಿ ವಾದಿಗಳನ್ನು ಸೇರ್ಪಡೆಗೊಳಿಸ ಬೇಕೆಂದು ಒಕ್ಕಲಿಗರ ಸಂಘದ ಮೂಲಕ ಹೈಕೋರ್ಟ್ಗೆ ಮನವಿ ಮಾಡಲು ತೀರ್ಮಾನಿಸಿದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ವಿವಿಧ

(ಮೊದಲ ಪುಟದಿಂದ) ಭಾಗಗಳಿಂದ ಆಗಮಿಸಿದ್ದ ಜಮ್ಮಾ ಹಿಡುವಳಿ ಹೊಂದಿರುವ ಒಕ್ಕಲಿಗ ಸಮುದಾಯದವರು ಭಾಗವಹಿಸಿದ್ದರು.

ಚೇತನ್ ಅವರು ಜಮ್ಮಾ ಹಿಡುವಳಿ ಹಾಗೂ ಕೂರ್ಗ್ ಬೈರೇಸ್ ಅಡಿಯಲ್ಲಿ ಕಲ್ಪಿಸಲಾಗಿರುವ ವಿಶೇಷ ವಿನಾಯಿತಿಗಳನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ರಿಟ್ ಪಿಟಿಷನ್ ಹಾಕಿದ್ದು, ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಪಾರ್ಟಿ ಮಾಡಲಾಗಿದೆ. ಒಂದು ವೇಳೆ ಈ ರಿಟ್ ಪಿಟಿಷನ್‌ನ್ನು ಕೋರ್ಟ್ ಮಾನ್ಯ ಮಾಡಿದರೆ ಕೊಡಗಿನ ಮೂಲ ನಿವಾಸಿಗಳು ತಮ್ಮ ವಿನಾಯಿತಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಚಂಗಪ್ಪ ಹೇಳಿದರು.

ಈಗಾಗಲೇ ಈ ವಿಚಾರಣೆಯಲ್ಲಿ ತಮ್ಮನ್ನೂ ಸೇರ್ಪಡೆಗೊಳಿಸಬೇಕೆಂದು ಅಖಿಲ ಕೊಡವ ಸಮಾಜ ವೀರಾಜಪೇಟೆ, ಗೌಡ ಫೆಡರೇಷನ್, ಕೊಡಗು ಹೆಗ್ಗಡೆ ಸಮಾಜ ವೀರಾಜಪೇಟೆ, ಕೊಡವ ಮುಸ್ಲಿಂ ಅಸೋಸಿಯೇಷನ್ ಬೆಂಗಳೂರು, ಕೊಡಗು ಜಿಲ್ಲಾ ಸಣ್ಣ ಬೆಳೆಗಾರರ ಸಂಘ ಸಿದ್ದಾಪುರ, ಸಿ.ಬಿ. ಗಣಪತಿ ಬೆಂಗಳೂರು, ಕೊಡವ ಕೂಟ ಎಲ್‌ಎಲ್‌ಸಿ ಮೋಕಿಂಗ್ ಬರ್ಡ್ ಡಲ್ಲಾಸ್-ಟೆಕ್ಸಾಸ್, ಯುಎಸ್‌ಎ ಸೇರಿದಂತೆ ಇತರ ಸಂಘ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿವೆ. ಒಕ್ಕಲಿಗ ಸಮುದಾಯದವರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಜಮ್ಮಾ ಹಿಡುವಳಿ ಹೊಂದಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನಿಸಬೇಕಿದೆ ಎಂದು ಚಂಗಪ್ಪ ವಿವರಿಸಿದರು.

ಈ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದು, ಮುಂದಿನ ೨೦೨೯ರವರೆಗೆ ಜಮ್ಮಾ ಹಿಡುವಳಿ ಹಾಗೂ ಕೂರ್ಗ್ ಬೈ ರೇಸ್‌ನ ವಿಶೇಷ ವಿನಾಯಿತಿಗಳನ್ನು ವಿಸ್ತರಿಸಲಾಗಿದೆ. ಈ ನಡುವೆ ಚೇತನ್ ಅವರು ಸಂವಿಧಾನದ ಸಮಾನತೆ ವಿಚಾರವನ್ನು ಉಲ್ಲೇಖಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದ ಆದೇಶ ವಿರುದ್ಧವಾಗಿ ಬಂದರೆ ಮೂಲ ನಿವಾಸಿಗಳು ವಿಶೇಷ ಹಕ್ಕುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಕೂರ್ಗ್ ಬೈರೇಸ್ ಮತ್ತು ಜಮ್ಮಾ ಹಿಡುವಳಿಯ ಅನುಕೂಲತೆಗಳ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕಿದೆ. ಈ ಹಿನ್ನೆಲೆ ತಮ್ಮನ್ನೂ ಸಹ ವಿಚಾರಣೆಯಲ್ಲಿ ಸೇರ್ಪಡೆಗೊಳಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಒಕ್ಕಲಿಗ ಸಮುದಾಯದಲ್ಲಿ ಜಮ್ಮಾ ಹಿಡುವಳಿ ಹೊಂದಿರುವ ಸಾವಿರಾರು ಕುಟುಂಬಗಳಿದ್ದು, ಇವರ ಸ್ವಾಯತ್ತತೆಗೆ ಸಮಸ್ಯೆಯಾಗಲಿದೆ. ಈ ಹಿನ್ನೆಲೆ ತಕ್ಷಣವೇ ನ್ಯಾಯಾಲಯದ ಮೊರೆ ಹೋಗಬೇಕೆಂದು ಸಭೆಯಲ್ಲಿದ್ದವರು ಅಭಿಪ್ರಾಯಿಸಿದರು.

ಸಭೆಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪಿ.ಕೆ. ರವಿ, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್, ತಾಲೂಕು ಒಕ್ಕಲಿಗರ ಸಂಘದ ರಾಮಚಂದ್ರ, ಎಸ್.ಪಿ. ಪೊನ್ನಪ್ಪ, ಐಗೂರು ಗೌಡ ಸಮಾಜದ ಅಧ್ಯಕ್ಷ ಡಿ.ಎಸ್. ಚಂಗಪ್ಪ, ನಗರ ಗೌಡ ಸಮಾಜದ ಅಧ್ಯಕ್ಷ ಪ್ರಕಾಶ್‌ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.