ಗೋಣಿಕೊಪ್ಪಲು.ಆ.೨೩: ಕೊಡಗು ಧ್ವನಿ ವಾರಪತ್ರಿಕೆಯ ಸಂಪಾದಕ ಹೆಚ್.ಕೆ.ಜಗದೀಶ್ ಹೊರತಂದಿರುವ ಪೊನ್ನಂಪೇಟೆ ನೂತನ ತಾಲೂಕು ಹೋರಾಟದ ಹೆಜ್ಜೆಗಳು ಎಂಬ ಪುಸ್ತಕವನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಬಿಡುಗಡೆಗೊಳಿಸಿದರು.

ಪೊನ್ನಂಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕರು, ಹಲವು ಹಿರಿಯರ ಹೋರಾಟದ ಫಲವಾಗಿ ಇಂದು ಪೊನ್ನಂಪೇಟೆ ತಾಲೂಕಾಗಿ ರಚನೆಯಾಗಿದೆ. ಈ ನೆನಪಿನಲ್ಲಿ ಪುಸ್ತಕ ಬಿಡುಗಡೆಯಾಗಿರುವುದು ಸ್ವಾಗತಾರ್ಹ, ನೂತನ ತಾಲೂಕಿಗೆ ತಹಶೀಲ್ದಾರ್ ಸೇರಿದಂತೆ ಇತರ ಸಿಬ್ಬಂದಿಗಳ ನೇಮಕಾತಿ ಹಾಗೂ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ನೂತನ ತಾಲೂಕು ರಚನೆಗೆ ಶ್ರಮಿಸಿದ ಸರ್ವರನ್ನು ಈ ಸಂದರ್ಭ ಶ್ಲಾಘಿಸಿದರು.

ಕೊಡಗಿಗೆ ಪ್ರತ್ಯೇಕ ಸಂಸದರು ಬೇಕು

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಮಾಜಿ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ತಾಲೂಕು ರಚನೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಹೋರಾಟದಿಂದ ನ್ಯಾಯ ಸಿಗಲಿದೆ ಎಂಬುದಕ್ಕೆ ಪೊನ್ನಂಪೇಟೆ ನೂತನ ತಾಲೂಕು ಜೀವಂತ ಉದಾಹರಣೆ. ಕೊಡಗು ಜಿಲ್ಲೆಯಿಂದ ಇಲ್ಲಿಯ ತನಕ ಯಾವುದೇ ಸಂಸದರು ಆರಿಸಿ ತೆರಳಿಲ್ಲ ಇದರಿಂದಾಗಿ ಕೊಡಗಿನ ಜನರ ಕಷ್ಟಗಳನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಲು ಸಾಧ್ಯವಾಗುತ್ತಿಲ್ಲ ಆ ನಿಟ್ಟಿನಲ್ಲಿ‘ಕೊಡಗಿಗೆ ಸಂಸದರು’ ಬೇಕೆಂದು ಹೋರಾಟವನ್ನು ಆರಂಭಿಸಬೇಕು. ಇಂದಿನಿAದಲೇ ಪಕ್ಷ ಬೇದ ಮರೆತು ಜಿಲ್ಲೆಯ ಜನರು ಒಗ್ಗಟ್ಟಿನಿಂದ ಹೋರಾಟ ನಡೆಸಿ ಜಿಲ್ಲೆಗೆ ಸಂಸದರನ್ನು ಪಡೆಯುವ ನಿಟ್ಟಿನಲ್ಲಿ ಹೋರಾಟ ಆರಂಭಿಸೋಣ ಎಂದು ಕರೆ ನೀಡಿದರು.

ಮಾಜಿ ಎಂಎಲ್‌ಸಿ ಅರುಣ್ ಮಾಚಯ್ಯ ಮಾತನಾಡಿ, ನಿರಂತರ ಹೋರಾಟದಿಂದ ನೂತನ ತಾಲೂಕು ರಚನೆಯಾಗಿದೆ. ಈ ಹೋರಾಟಕ್ಕೆ ಹಿರಿಯರು ಸೇರಿದಂತೆ ತಾಲೂಕಿನ ಪ್ರತಿ ನಾಗರಿಕನ ಕೊಡುಗೆ ಅಪಾರವಿದೆ. ತಾಲೂಕನ್ನು ಮಾದರಿ ತಾಲೂಕನ್ನಾಗಿ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದರು.

ಪೊನ್ನAಪೇಟೆ ತಾಲೂಕು ಹೋರಾಟ ಸಮಿತಿಯ ಸಂಚಾಲಕರಾದ ಮಾಚಿಮಾಡ ಎಂ.ರವೀAದ್ರ ಮಾತನಾಡಿ ಪಕ್ಷಾತೀತ ಹೋರಾಟದಿಂದ ಫಲ ಪಡೆದಿದ್ದೇವೆ. ಮುಂದೆ ಸಂಸದರನ್ನು ಜಿಲ್ಲೆಗೆ ಪಡೆಯಲು ಹೋರಾಟದ ರೂಪುರೇಷೆ ಮಾಡಲಾಗುವುದು ಹೋರಾಟದ ಮೂಲಕ ಮುಂದೆ ನ್ಯಾಯ ಸಿಗುವ ಆಶಾ ಭಾವನೆ ವ್ಯಕ್ತ ಪಡಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಚೆಪ್ಪುಡೀರ ಜಿ. ಕುಶಾಲಪ್ಪ ಮಾತನಾಡಿದರು.

ನಾಗರಿಕ ವೇದಿಕೆಯ ಹಿರಿಯ ಸದಸ್ಯರಾದ ಮೂಕಳೇರ ಕುಶಾಲಪ್ಪ, ಮನೆಯಪಂಡ ಎಸ್. ಅಪ್ಪಯ್ಯ, ಚೆರಿಯಪಂಡ ಉಮೇಶ್, ಮತ್ರಂಡ ಪಿ.ಅಪ್ಪಚ್ಚು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ವೆಂಕಟೇಶ್, ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ, ನಾಗರಿಕ ವೇದಿಕೆಯ ಅಧ್ಯಕ್ಷ ಪಿ.ಬಿ.ಪೂಣಚ್ಚ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಾನಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಿರಿಯ ನಾಗರಿಕರು ಭಾಗವಹಿಸಿದ್ದರು. ಪೊನ್ನಂಪೇಟೆ ತಾಲೂಕು ರಚನೆಗೆ ಶ್ರಮವಹಿಸಿದವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕಿ ಮಾಯಮ್ಮ ಪ್ರಾರ್ಥಿಸಿದರು. ಅಧ್ಯಕ್ಷ ಪಿ.ಬಿ.ಪೂಣಚ್ಚ ಸ್ವಾಗತಿಸಿದರು. ಸದಸ್ಯರಾದ ಪಿ.ಟಿ.ಪ್ರಭಾಕರ್ ವಂದಿಸಿದರು.