ಸೋಮವಾರಪೇಟೆ,ಆ.೨೩: ಸಂತೆ ದಿನದಂದು ಇಲ್ಲಿನ ಸಿ.ಕೆ. ಸುಬ್ಬಯ್ಯ ರಸ್ತೆಯ ಎರಡೂ ಬದಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಹಾಕಿಕೊಂಡು ವ್ಯಾಪಾರಕ್ಕೆ ಸಿದ್ಧಗೊಳ್ಳುತ್ತಿದ್ದ ವರ್ತಕರನ್ನು ಪಟ್ಟಣ ಪಂಚಾಯಿತಿ ವತಿಯಿಂದ ತೆರವುಗೊಳಿಸುವ ಮೂಲಕ ಈ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಸಂತೆ ದಿನವಾದ ಸೋಮವಾರ ದಂದು ಈ ರಸ್ತೆಯ ಎರಡೂ ಬದಿ ಯಲ್ಲಿ ಅಂಗಡಿಗಳನ್ನು ಹಾಕಿಕೊಂಡು, ಚರಂಡಿಯ ಮೇಲೆ ವ್ಯಾಪಾರ ಮಾಡುತ್ತಿದ್ದುದರಿಂದ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ಅನಾನುಕೂಲವಾಗಿತ್ತು. ಈ ಬಗ್ಗೆ ‘ಶಕ್ತಿ’ಯಲ್ಲಿ ವರದಿಯ ಮೂಲಕ ಪಟ್ಟಣ ಪಂಚಾಯಿತಿಯ ಗಮನ ಸೆಳೆಯಲಾಗಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಿ. ಸಂಜೀವ ಸೇರಿದಂತೆ ಸಿಬ್ಬಂದಿಗಳು, ಸಂತೆ ದಿನವಾದ ಇಂದು ಬೆಳಗ್ಗಿನಿಂದಲೇ ಸ್ಥಳದಲ್ಲಿ ಉಪಸ್ಥಿತರಿದ್ದು, ರಸ್ತೆ ಬದಿಯಲ್ಲಿ ಅಂಗಡಿಗಳನ್ನು ಹಾಕಲು ಮುಂದಾಗುತ್ತಿದ್ದ ವರ್ತಕರಿಗೆ ತಿಳಿಹೇಳಿ, ತಮ್ಮ ಅಂಗಡಿಗಳನ್ನು ಮಾರುಕಟ್ಟೆಗೆ ಸ್ಥಳಾಂತರಿಸುವAತೆ ಸೂಚಿಸಿದರು.

ಇದರಿಂದಾಗಿ ಯಾವೊಬ್ಬ ವರ್ತಕರೂ ಸಹ ರಸ್ತೆಬದಿ, ಚರಂಡಿಯ ಮೇಲೆ ಅಂಗಡಿಗಳನ್ನು ಹಾಕಲಿಲ್ಲ. ಪರಿಣಾಮ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರ ಯಾವುದೇ ಅಡ್ಡಿಯಿಲ್ಲದೇ ನಡೆಯಿತು.