ಗೋಣಿಕೊಪ್ಪಲು, ಆ.೨೩: ಇತಿಹಾಸ ಪ್ರಸಿದ್ಧವಾದ ಬೊಟ್ಯತ್ ನಾಡ್‌ಗೆ ಒಳಪಟ್ಟಿರುವ ಕುಂದ ಬೆಟ್ಟದ ಮಹದೇವರ ದೇವಸ್ಥಾನದ ಮೇಲ್ಭಾಗದಲ್ಲಿ ಅಳವಡಿಸಿದ್ದ ಬಸವಮೂರ್ತಿಯನ್ನು ಕಿಡಿಗೇಡಿಗಳು ಹಾಳುಗೆಡವಿರುವ ಸುದ್ದಿ ತಿಳಿದ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುನೀಲ್ ಸುಬ್ರಮಣಿ, ಪ್ರಭಾರ ಎಸ್.ಪಿ.ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಟ್ಟದ ತುದಿಯವರೆಗೂ ಕಾಲ್ನಡಿಗೆಯಲ್ಲಿಯೇ ಸಾಗಿದ ಶಾಸಕದ್ವಯರು ದೇವಾಲಯ ಮೇಲಿದ್ದ ಬಸವನ ಮೂರ್ತಿ ಕೆಡವಿದ ಜಾಗವನ್ನು ಪರಿಶೀಲನೆ ನಡೆಸಿದರು.

ಗ್ರಾಮದ ಪ್ರಮುಖರಾದ ಗುಮ್ಮಟ್ಟೀರ ಕಿಲನ್ ಗಣಪತಿ, ಗುಮ್ಮಟೀರ ದರ್ಶನ್, ತೀತರಮಾಡ ಶರಣು, ಸಣ್ಣುವಂಡ ಅಪ್ಪಿ,ನೆರವಂಡ ಗೌತಮ್ ಹಾಗೂ ಮತ್ತಿತರರು, ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಬಸವನ ಮೂರ್ತಿಗೆ ಹಾನಿಯಾದ ಘಟನೆ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.

ಘಟನೆಗಳನ್ನು ತಡೆಗಟ್ಟುವ ಸಲುವಾಗಿ ಮುಂದಿನ ದಿನಗಳಲ್ಲಿ ಬೆಟ್ಟಕ್ಕೆ ಹತ್ತುವ ಸ್ಥಳದಲ್ಲಿ ಗೇಟ್ ನಿರ್ಮಿಸುವ ಮೂಲಕ ಸಿ.ಸಿ.ಕ್ಯಾಮರಾ ಅಳವಡಿಸುವ ಚಿಂತನೆ ನಡೆದಿದೆ. ಗ್ರಾಮಸ್ಥರ ಸಮ್ಮುಖದಲ್ಲಿ ಈ ಬಗ್ಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಗ್ರಾಮಸ್ಥರು ಶಾಸಕರಿಗೆ ಮಾಹಿತಿ ಒದಗಿಸಿದರು.

ಮುಂಜಾಗ್ರತಾ ಕ್ರಮವಾಗಿ ಬೆಟ್ಟಕ್ಕೆ ಹತ್ತುವ ಸ್ಥಳದಲ್ಲಿ ಪೊಲೀಸ್ ಬ್ಯಾರಿಕೇಡ್ ಅಳವಡಿಸುವ ಮೂಲಕ ಸಂಚಾರ ನಿರ್ಬಂಧ ಮಾಡಲಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಜಯರಾಂ ಶಾಸಕರಿಗೆ ಮಾಹಿತಿ ಒದಗಿಸಿದರು.

ಬಸವನ ಮೂರ್ತಿಗೆ ಹಾನಿಯಾದ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುವಂತೆ ಶಾಸಕ ಕೆ.ಜಿ. ಬೋಪಯ್ಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಭೇಟಿಯ ವೇಳೆ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಆರ್.ಎಂ.ಸಿ.ನಿರ್ದೇಶಕ ಗುಮ್ಮಟೀರ ಕಿಲನ್ ಗಣಪತಿ, ಸುಬ್ರಮಣ್ಯ, ಹಾತೂರು ಗ್ರಾ.ಪಂ. ಅಧ್ಯಕ್ಷ ಕುಪ್ಪಂಡ ಗಿರೀಶ್ ಪೂವಣ್ಣ, ಬಿಜೆಪಿ ಪಕ್ಷದ ಮುಖಂಡರಾದ ಸುಬ್ರಮಣಿ, ಗಣೇಶ್, ಕುಪ್ಪಂಡ ಭೀಮ, ಲೋಕೇಶ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.

ಕೊಡಗು ಜಿಲ್ಲೆಯ ಅಡಿಷನಲ್ ಎಸ್.ಪಿ. ಶಿವಕುಮಾರ್, ಡಿವೈಎಸ್ಪಿ ಜಯಕುಮಾರ್, ಎಸ್.ಐ.ಸುಬ್ಬಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. - ಹೆಚ್.ಕೆ.ಜಗದೀಶ್