*ವೀರಾಜಪೇಟೆ, ಆ. ೨೨: ಕೆಲವೊಂದು ಸಮಸ್ಯೆಗಳಿಗೆ ಸಂಬAಧ ಪಟ್ಟ ಸ್ಥಳೀಯ ಆಡಳಿತದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಆಗುವುದಿಲ್ಲವೋ? ಅಥವಾ ಪರಿಹಾರ ಕಂಡುಕೊಳ್ಳುವುದು ಬೇಕಾಗಿಲ್ಲವಾ? ಎನ್ನುವ ಪ್ರಶ್ನೆಯೊಂದು ಈಗ ವೀರಾಜಪೇಟೆ ನಾಗರಿಕರಿಗೆ ಎದುರಾಗಿದೆ.
ವೀರಾಜಪೇಟೆಗೆ ಗೋಣಿಕೊಪ್ಪ ಕಡೆಯಿಂದ ಬರುವಾಗ ಮೊದಲು ಎದುರಾಗುವುದೇ ಗಬ್ಬೆಂದು ನಾರುವ ಮಟನ್ ಮಾರುಕಟ್ಟೆ ರಸ್ತೆ. ಈ ರಸ್ತೆಯಲ್ಲಿ ಪಟ್ಟಣ ಪಂಚಾಯಿತಿ ವರ್ಷಗಳಿಂದ ಬಗೆಹರಿಸಲಾಗದೇ ಬಿಟ್ಟಿರುವ ಕಸದ ರಾಶಿ, ದುರ್ನಾತ, ಅಶುಚಿತ್ವ ನಗರದ ಸ್ವಚ್ಛತೆಗೆ ಕೈಗನ್ನಡಿಯಂತೆ ಎದ್ದು ಕಾಣುತ್ತದೆ. ಇದರ ಪಕ್ಕದಲ್ಲೇ ಆಟೋ ನಿಲ್ದಾಣವಿದೆ, ನೊಣಗಳ ರಾಶಿ, ಸಹಿಸಲು ಅಸಾಧ್ಯವಾದ ದುರ್ನಾತ ಇವುಗಳ ಜೊತೆಗೆ ಇಲ್ಲಿನ ಆಟೋ ಚಾಲಕರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ. ಆದರೂ ಕೂಡಾ ಪಟ್ಟಣ ಪಂಚಾಯತಿ ಮಾತ್ರ ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ.
ಇಲ್ಲಿನ ಸಮಸ್ಯೆಗೆ ಮೂಲ ಕಾರಣ ಸಮೀಪದಲ್ಲಿರುವ ಅಂಗಡಿಯವರು ತ್ಯಾಜ್ಯ ತಂದು ಸುರಿವದು ಎಂದು ಸಾರ್ವಜನಿಕರು ದೂರಿ ಸಿಸಿಟಿವಿ ಅಳವಡಿಸುವ ಪ್ರಯತ್ನವೂ ನಡೆದಿತ್ತು ಆದರೂ ಪ್ರಯೋಜನವಾಗಲಿಲ್ಲ, ದೊಡ್ಡದೊಂದು ಕಸ ಸುರಿಯುವ ಕಸದಬುಟ್ಟಿ ಇರಿಸಲಾಯಿತು. ಸಾರ್ವಜನಿಕರು ಕಸದಬುಟ್ಟಿಯೊಳಗೆ ಕಸ ಸುರಿಯದೆ, ಕಸದಬುಟ್ಟಿಯ ಪಕ್ಕಕ್ಕೆ ಕಸ ಸುರಿದು ಹೋಗಲಾರಂಭಿಸಿದರು. ಇದು ಇನ್ನೊಂದು ಬಗೆಯ ಸಮಸ್ಯೆ ಹುಟ್ಟು ಹಾಕಿದೆ.
ಪ್ರತಿದಿನ ಈ ಬೃಹದಾಕಾರದ ಕಸದ ಬುಟ್ಟಿಯೊಳಗೆ ಇಳಿದು ಅಲ್ಲಿಂದ ಕಸವನ್ನು ಲಾರಿಗೆ ತುಂಬಿಸಿಕೊಳ್ಳು ವುದಲ್ಲದೇ, ಪಕ್ಕದಲ್ಲೆಲ್ಲಾ ಬೇಕಾಬಿಟ್ಟಿ ಸುರಿದಿರುತ್ತಿದ್ದ ಕಸ ತೆರವು ಮಾಡಲು ಪೌರಕಾರ್ಮಿಕರಿಗೆ ಸಾಕಷ್ಟು ಸಮಯ ಹಿಡಿಯುತಿತ್ತು.
ಇನ್ನು ಕಸದ ಬುಟ್ಟಿಯಲ್ಲಿ ಅಳಿದುಳಿದ ಕಸದಿಂದ ವಿಪರೀತ ಎನಿಸುವಷ್ಟು ವಾಸನೆ ಬರುತಿತ್ತು. ಕೊನೆಗೆ ಪಟ್ಟಣ ಪಂಚಾಯಿತಿ ಆ ಕಸದಬುಟ್ಟಿಯನ್ನು ಅಲ್ಲಿಂದ ತೆರವು ಮಾಡಿದರು. ಆದರೆ ಸಮಸ್ಯೆಯನ್ನು ಸರಿ ಮಾಡಲು ಆಗಲಿಲ್ಲ.
ಇಲ್ಲಿ ಸಾರ್ವಜನಿಕರು ಮಾತ್ರವಲ್ಲ, ಹಳ್ಳಿಗಳಿಂದ, ಹೋಮ್ ಸ್ಟೇ, ರೆಸಾರ್ಟ್ಗಳ ಕಸವನ್ನು ಇಲ್ಲಿ ಬೆಳ್ಳಂಬೆಳ್ಳಿಗ್ಗೆ ವಾಹನಗಳಲ್ಲಿ ತಂದು ಸುರಿದು ಹೋಗುತ್ತಿದ್ದಾರೆ.
ಇಲ್ಲಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯದ ಸ್ಥಳೀಯ ಆಡಳಿತದ ಲೋಪಕ್ಕಿಂತ ಹೆಚ್ಚು ಗೊತ್ತಿದ್ದು ಕಸ ತಂದು ಸುರಿಯುತ್ತಿರುವ ಸಾರ್ವಜನಿಕರ ತಪ್ಪು ಅಧಿಕವಿದೆ.
ವರ್ಷಗಳಿಂದ ಈ ಸಮಸ್ಯೆಯನ್ನು ಕಂಡುಕಾಣದAತೆ ವರ್ತಿಸುವ ಬದಲಿಗೆ ಪಟ್ಟಣ ಪಂಚಾಯಿತಿ ಈ ಸಮಸ್ಯೆಗೆ ತಾರ್ಕಿಕವಾದ ಪರಿಹಾರ ಕಂಡುಹಿಡಿಯಲೇಬೇಕಾಗಿದೆ.
ಇವತ್ತಿನ ದಿನಗಳಲ್ಲಿ ಕೊಡಗಿನ ಪುಟ್ಟ ಹಳ್ಳಿಗಳಲ್ಲಿ ಗ್ರಾ.ಪಂ ಸದಸ್ಯರು ತಮ್ಮೂರಿನ ರಸ್ತೆ ಪಕ್ಕ ಕಸ ಸುರಿದು ಹೋದವರನ್ನು, ಹಿಡಿದು ಬುದ್ದಿಹೇಳಿ ಕಳುಹಿಸು ತ್ತಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.
ಆದರೆ ನಗರದ ಒಳಗೆ ಪ್ರತಿದಿನ ಕಸ ಸುರಿದು ಕೆಲವು ಕಿಡಿಗೇಡಿಗಳು ಹೋಗುತ್ತಿದ್ದರೂ ಪಟ್ಟಣ ಪಂಚಾಯಿತಿ ದಿವ್ಯ ಮೌನಕ್ಕೆ ಶರಣಾಗಿದೆ. ಇದಕ್ಕೆ ಆದಷ್ಟು ಶೀಘ್ರ ಪರಿಹಾರವನ್ನು ಪಟ್ಟಣ ಪಂಚಾಯಿತಿ ಕಂಡುಹಿಡಿಯಲೇಬೇಕಿದೆ ಎನ್ನುವುದು ಬೇಸೆತ್ತ ನಾಗರೀಕರ ಆಗ್ರಹ.
- ಉಷಾಪ್ರೀತಮ್