ಸೋಮವಾರಪೇಟೆ, ಆ. ೨೧: ಇಲ್ಲಿನ ಪಟ್ಟಣ ಪಂಚಾಯಿತಿಯ ವಾರ್ಡ್ ೧ ಹಾಗೂ ವಾರ್ಡ್ ೩ರಲ್ಲಿ ತೆರವಾಗಿರುವ ಸದಸ್ಯ ಸ್ಥಾನಕ್ಕೆ ಸೆಪ್ಟೆಂಬರ್ ೩ ರಂದು ಚುನಾವಣೆ ನಿಗದಿಗೊಳಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದ್ದು, ಈಗಾಗಲೇ ವಾರ್ಡ್ಗಳಲ್ಲಿ ಸದಾಚಾರ ಸಂಹಿತೆ ಜಾರಿಗೆ ಬಂದಿದೆ.

ಬಿಸಿಎAಬಿ ಮೀಸಲು ಕ್ಷೇತ್ರವಾಗಿರುವ ವಾರ್ಡ್ ೧ರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದ ಉದಯಶಂಕರ್ ಹಾಗೂ ವಾರ್ಡ್ ೩ರಲ್ಲಿ ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜಯಗಳಿಸಿದ್ದ ಪ.ಪಂ. ಅಧ್ಯಕ್ಷೆಯೂ ಆಗಿದ್ದ ನಳಿನಿ ಗಣೇಶ್ ಅವರ ನಿಧನದಿಂದ ತೆರವಾಗಿದ್ದ ಈ ಎರಡೂ ಸ್ಥಾನಗಳಿಗೆ ಸೆಪ್ಟೆಂಬರ್ ೩ ರಂದು ಮತದಾನ ನಡೆಯಲಿದೆ.

ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದರೂ ಈವರೆಗೆ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ. ತಾ. ೨೩ರಂದು (ನಾಳೆ) ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ವಾರ್ಡ್ ೧ರಿಂದ ಬಿಜೆಪಿ ಅಭ್ಯರ್ಥಿಯಾಗಿ ಮೃತ್ಯುಂಜಯ (ಜಯಣ್ಣ) ಅವರನ್ನು ಅಂತಿಮಗೊಳಿಸಲಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಭುವನೇಶ್ವರ (ಧನು) ನಾಮಪತ್ರ ಸಲ್ಲಿಸುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್‌ನಿಂದ ಸ್ಪರ್ಧಿಸಲು ಮೂವರು ಆಕಾಂಕ್ಷೆ ಹೊಂದಿದ್ದು, ಇನ್ನೂ ಅಭ್ಯರ್ಥಿಗಳ ಆಯ್ಕೆಯಾಗಿಲ್ಲ. ಎಎಪಿ ಪಕ್ಷದಿಂದಲೂ ಇಲ್ಲಿ ಅಭ್ಯರ್ಥಿ ಇರುವ ಸುಳಿವು ಲಭಿಸಿದೆ.

ಭಾರತೀಯ ಜನತಾ ಪಾರ್ಟಿಯ ವಾರ್ಡ್ ಎಂದೇ ಬಿಂಬಿತವಾಗಿದ್ದ ವಾರ್ಡ್೧ರಲ್ಲಿ ಕಳೆದ ಬಾರಿ ಕಾಂಗ್ರೆಸ್‌ನ ಉದಯಶಂಕರ್ ಅವರು ಜಯಗಳಿಸಿದ್ದರು. ವೈಯಕ್ತಿಕ ವರ್ಚಸ್ಸು ಅವರ ಗೆಲುವಿಗೆ ಸಹಕಾರಿಯಾಗಿತ್ತು. ಇದೀಗ ಇದೇ ವಾರ್ಡ್ನಿಂದ ಕಾಂಗ್ರೆಸ್ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಭುವನೇಶ್ವರ ಅವರು ಅಭ್ಯರ್ಥಿಯಾಗಲಿದ್ದಾರೆ.

ಈ ವಾರ್ಡ್ನಿಂದ ಬಿಜೆಪಿಯಿಂದ ಸ್ಪರ್ಧಿಸಲು ಸಾಗರ್, ಗಿರೀಶ್ ಹಾಗೂ ಸಚಿನ್ ಅವರುಗಳು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಅಂತಿಮವಾಗಿ ಮೃತ್ಯುಂಜಯ ಅವರಿಗೆ ಟಿಕೆಟ್ ನೀಡಲಾಗಿದೆ.

ಮೃತ್ಯುಂಜಯ ಅವರು ಆರ್‌ಎಸ್‌ಎಸ್‌ನ ಹಿರಿಯ ಸ್ವಯಂಸೇವಕರಾಗಿದ್ದು, ತಾಲೂಕು ಕಾರ್ಯವಾಹರಾಗಿಯೂ ಕೆಲಸ ಮಾಡಿದ್ದಾರೆ. ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರೂ ಆಗಿದ್ದು, ಆರ್‌ಎಸ್‌ಎಸ್‌ನ ನಿಕಟ ಸಂಪರ್ಕ ಹೊಂದಿದ್ದಾರೆ. ಇದೇ ಕಾರಣಕ್ಕೆ ಇತರ ಆಕಾಂಕ್ಷಿಗಳೂ ಸಹ ಹಿಂದೆ ಸರಿದಿದ್ದಾರೆ.

ಇನ್ನು ವಾರ್ಡ್ ೩ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಮೂವರು ಪ್ರಬಲ ಆಕಾಂಕ್ಷಿಗಳಿದ್ದು, ತಾ. ೨೩ರಂದೇ ಟಿಕೆಟ್ ಫೈನಲ್ ಮಾಡಿ ಅಂದೇ ನಾಮಪತ್ರ ಸಲ್ಲಿಸಲು ಬಿಜೆಪಿ ಪ್ರಮುಖರು ನಿರ್ಧರಿಸಿದ್ದಾರೆ. ಜೆಡಿಎಸ್‌ನಿಂದ ಈ ವಾರ್ಡ್ಗೆ ಪುಷ್ಪ ಸತೀಶ್ ಅಭ್ಯರ್ಥಿಯಾಗುವ ಸಂಭವವಿದ್ದು, ಕಾಂಗ್ರೆಸ್‌ನಿAದ ಸಂಧ್ಯಾ ಪ್ರಕಾಶ್ ಅಭ್ಯರ್ಥಿಯಾಗಲಿದ್ದಾರೆ.

ಪುಷ್ಪ ಸತೀಶ್ ಅವರು ಕಳೆದ ಬಾರಿಯೂ ಚುನಾವಣೆ ಎದುರಿಸಿದ್ದು, ಅತ್ಯಲ್ಪ ಮತಗಳ ಅಂತರದಿAದ ನಳಿನಿ ಗಣೇಶ್ ವಿರುದ್ಧ ಸೋಲನುಭವಿಸಿದ್ದರು. ಇದೀಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಈ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರೂ ಪರಿಶಿಷ್ಟ ಜಾತಿ/ಪಂಗಡದ ಮತದಾರರೇ ಅಧಿಕವಿರುವ ಹಿನ್ನೆಲೆ ಇದೇ ವರ್ಗದ ಅಭ್ಯರ್ಥಿಗಳು ಮೂರೂ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ.

ಬಿಜೆಪಿಯಿಂದ ನಳಿನಿ ಗಣೇಶ್ ಅವರ ಸೊಸೆಯೂ ಸೇರಿದಂತೆ ಇತರ ಈರ್ವರು ಆಕಾಂಕ್ಷಿಗಳಾಗಿದ್ದಾರೆ. ಇಲ್ಲಿ ಹೊಸ ಮುಖ ದಾಕ್ಷಾಯಿಣಿಗೆ ಟಿಕೆಟ್ ಲಭಿಸಬಹುದು ಎನ್ನಲಾಗಿದ್ದು, ಪಕ್ಷದ ಮುಖಂಡರು ಈ ಕ್ಷೇತ್ರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ.

ಮೈತ್ರಿ ಖತಂ: ಕಳೆದ ಸಾಲಿನ ಪ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದರಿAದ ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಹಕಾರಿಯಾಗಿತ್ತು ಎಂಬ ವಾದಗಳು ಒಂದೆಡೆಯಿದ್ದರೆ, ಕಳೆದ ಸಾಲಿನಲ್ಲಿ ಬಿಜೆಪಿ ಸದಸ್ಯರುಗಳ ನಡುವಿನ ಹೊಂದಾಣಿಕೆ ಕೊರತೆ, ನಿರೀಕ್ಷಿತ ಮಟ್ಟದಲ್ಲಿ ಆಗದ ಅಭಿವೃದ್ಧಿ ಕಾರ್ಯವೂ ಸೋಲಿಗೆ ಕಾರಣ ಎಂಬ ವಾದಗಳು ಮತ್ತೊಂದೆಡೆ ಇದೆ.

ಕಳೆದ ಬಾರಿ ವಾರ್ಡ್ ೧ರಿಂದ ಕಾಂಗ್ರೆಸ್ ಹಾಗೂ ವಾರ್ಡ್ ೩ರಿಂದ ಜೆಡಿಎಸ್ ಸ್ಪರ್ಧಿಸಿತ್ತು. ಒಂದನೇ ವಾರ್ಡ್ನಲ್ಲಿ ಕಾಂಗ್ರೆಸ್ ಗೆದ್ದಿದ್ದರೆ, ಮೂರನೇ ವಾರ್ಡ್ನಲ್ಲಿ ಜೆಡಿಎಸ್ ಸೋತು ಬಿಜೆಪಿ ಗೆದ್ದಿತ್ತು. ಈ ಬಾರಿಯೂ ವಾರ್ಡ್ ೧ರಲ್ಲಿ ಕಾಂಗ್ರೆಸ್ ಹಾಗೂ ವಾರ್ಡ್ ೩ರಲ್ಲಿ ಜೆಡಿಎಸ್ ಸ್ಪರ್ಧಿಸುವ ಬಗ್ಗೆ ಮಾತುಕತೆ ನಡೆದಿತ್ತು.

ಮೈತ್ರಿಯಾಗಿ ಚುನಾವಣೆ ಎದುರಿಸಲು ಜೆಡಿಎಸ್‌ನವರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಜೀವಿಜಯ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವುದರಿಂದ ಸ್ಥಳೀಯವಾಗಿ ಮೈತ್ರಿಗೆ ಕಾಂಗ್ರೆಸ್ ಸಿದ್ಧವಾಗಿರಲಿಲ್ಲ. ಪರಿಣಾಮ ಎರಡೂ ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮೈತ್ರಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ತಾ. ೨೩ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ೨೪ ರಂದು ಪರಿಶೀಲನೆ, ೨೬ರೊಳಗೆ ನಾಮಪತ್ರ ವಾಪಸ್ ಪಡೆಯುವುದು, ಸೆಪ್ಟೆಂಬರ್ ೩ ರಂದು ಚುನಾವಣೆ, ಮರು ಮತದಾನದ ಅವಶ್ಯಕತೆ ಉಂಟಾದಲ್ಲಿ ಸೆ. ೫ ರಂದು ಮರು ಮತದಾನ, ತಾ. ೬ ರಂದು ಮತ ಎಣಿಕೆ ನಡೆಯಲಿದೆ.

ಕಳೆದ ೨೦೧೮ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ೩, ಕಾಂಗ್ರೆಸ್ ೪ ಹಾಗೂ ಜೆಡಿಎಸ್ ೩ ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಒಂದು ಸ್ಥಾನ ಪಕ್ಷೇತರ ಸದಸ್ಯರ ಪಾಲಾಗಿತ್ತು. ಮೈತ್ರಿಯಿಂದಾಗಿ ಕಾಂಗ್ರೆಸ್ ೬ ರಲ್ಲಿ ೪, ಜೆಡಿಎಸ್ ೫ ರಲ್ಲಿ ೩ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಬಿಜೆಪಿ ೧೧ರಲ್ಲಿ ೩ ಸ್ಥಾನ ಗಳಿಸಿತ್ತು. ಇದರಲ್ಲಿ ಕಾಂಗ್ರೆಸ್‌ನ ಉದಯಶಂಕರ್, ಬಿಜೆಪಿಯ ನಳಿನಿ ಗಣೇಶ್ ನಿಧನರಾಗಿದ್ದಾರೆ. ಪಕ್ಷೇತರ ಸದಸ್ಯ ಶುಭಕರ್ ಅವರು ಬಿಜೆಪಿಗೆ ಬೆಂಬಲ ನೀಡಿರುವುದರಿಂದ ಸದ್ಯ ಪ.ಪಂ.ನಲ್ಲಿ ಮೂರೂ ಪಕ್ಷಗಳಿಂದ ತಲಾ ಮೂವರು ಸದಸ್ಯರಿದ್ದಾರೆ.

-ವಿಜಯ್ ಹಾನಗಲ್