ವೀರಾಜಪೇಟೆ, ಆ. ೨೧: ವೀರಾಜಪೇಟೆ ನಗರದ ಪುರಾತನ ಚರ್ಚ್ ಆದ ಸಂತ ಅನ್ನಮ್ಮನವರ ದೇವಾಲಯಕ್ಕೆ ಸಂಬAಧಿಸಿದ ಕೃಷಿ ಭೂಮಿಯು ವೀರಾಜಪೇಟೆ ಸಮೀಪದ ಆರ್ಜಿ ಗ್ರಾಮದಲ್ಲಿದ್ದು ಇಲ್ಲಿ ಕಳೆದ ನಾಲ್ಕು ದಿವಸಗಳ ಕಾಲ ಭತ್ತದ ಸಸಿಮಡಿಗಳನ್ನು ತಯಾರಿಸಿ ನಾಟಿ ಕಾರ್ಯ ನಡೆಯಿತು. ಬಹಳ ಹಿಂದಿನ ಕಾಲದಿಂದಲೂ ಇಲ್ಲಿ ಭತ್ತದ ಕೃಷಿ ಮಾಡಲಾಗುತ್ತಿದ್ದು ಸುಮಾರು ೩೦ ಎಕರೆಯಷ್ಟು ಗದ್ದೆಯಲ್ಲಿ ನಾಟಿಯನ್ನು ಮಾಡಲಾಯಿತು.
ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರುಗಳು ಹಾಗೂ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ, ಕೊಡಗು ವಲಯದ ಶ್ರೇಷ್ಠ ಗುರುಗಳಾದಂತಹ ರೆ.ಫಾ. ಮದಲೈ ಮುತ್ತು ಅವರು ವಿಶೇಷ ಕಾಳಜಿ ವಹಿಸಿ ಪ್ರತಿವರ್ಷ ಈ ನಾಟಿ ಕಾರ್ಯವನ್ನು ನಡೆಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ಅದೆಷ್ಟೋ ಕೃಷಿ ಭೂಮಿಯನ್ನು ನೆಡದೆ ಬಂಜರು ಬಿಡುತ್ತಿದ್ದು ಧರ್ಮಗುರುಗಳ ಕಾರ್ಯ ವೈಖರಿಯನ್ನು ವೀರಾಜಪೇಟೆ ಭಾಗದಲ್ಲಿ ಸಾರ್ವಜನಿಕರು ಪ್ರಶಂಸಿಸಿದ್ದಾರೆ.