೪೦೦ ಜನರನ್ನು ಸ್ವದೇಶಕ್ಕೆ ಕರೆತಂದ ಭಾರತ
ನವದೆಹಲಿ, ಆ. ೨೨: ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಕಾಬೂಲ್ ನಗರದಿಂದ ಇಲ್ಲಿಯವರೆಗೂ ೩೨೯ ಭಾರತೀಯರು ಮತ್ತು ಇಬ್ಬರು ಅಫ್ಘಾನ್ ಶಾಸಕರು ಸೇರಿದಂತೆ ಸುಮಾರು ೪೦೦ ಜನರನ್ನು ಮೂರು ವಿಭಿನ್ನ ವಿಮಾನಗಳಲ್ಲಿ ಸ್ವದೇಶಕ್ಕೆ ಕರೆತರಲಾಗಿದೆ. ೧೦೭ ಭಾರತೀಯರು ಮತ್ತು ೨೩ ಅಫ್ಘಾನ್ ಸಿಖ್ಖರು ಮತ್ತು ಹಿಂದುಗಳು ಸೇರಿದಂತೆ ಒಟ್ಟು ೧೬೮ ಜನರನ್ನು ಕಾಬೂಲ್‌ನಿಂದ ಭಾರತೀಯ ವಾಯು ಪಡೆಯ ಅ-೧೭ ಹೆವಿ-ಲಿಫ್ಟ್ ಮಿಲಿಟರಿ ಸಾರಿಗೆ ವಿಮಾನದ ಮೂಲಕ ದೆಹಲಿಯ ಸಮೀಪದ ಹಿಂಡನ್ ವಾಯುನೆಲೆಗೆ ಕರೆತರಲಾಯಿತು. ೮೭ ಭಾರತೀಯರು ಮತ್ತು ಇಬ್ಬರು ನೇಪಾಳಿ ಪ್ರಜೆಗಳ ಇನ್ನೊಂದು ತಂಡವನ್ನು ದುಶನ್‌ಬೆಯಿಂದ ಏರ್ ಇಂಡಿಯಾ ವಿಮಾನದಲ್ಲಿ ವಾಪಸ್ ಕರೆತರಲಾಯಿತು. ಅವರನ್ನು ಐಎಎಫ್ ವಿಮಾನದಲ್ಲಿ ತಜಕಿಸ್ತಾನದ ರಾಜಧಾನಿಗೆ ಸ್ಥಳಾಂತರಿಸಿದ ಒಂದು ದಿನದ ನಂತರ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತ್ಯೇಕವಾಗಿ, ಕಳೆದ ಕೆಲವು ದಿನಗಳಲ್ಲಿ ಅಮೇರಿಕಾ ಮತ್ತು ನ್ಯಾಟೋ ವಿಮಾನಗಳ ಮೂಲಕ ಕಾಬೂಲ್‌ನಿಂದ ದೋಹಾಕ್ಕೆ ಸ್ಥಳಾಂತರಿಸಲ್ಪಟ್ಟ ೧೩೫ ಭಾರತೀಯರ ತಂಡವನ್ನು ವಿಶೇಷ ವಿಮಾನದಲ್ಲಿ ದೋಹಾದಿಂದ ದೆಹಲಿಗೆ ಹಿಂತಿರುಗಿಸಲಾಯಿತು ಎಂದು ಅವರು ಹೇಳಿದರು. ಭಾರತವು ಅಮೇರಿಕಾ, ಕತಾರ್, ತಜಕಿಸ್ತಾನ್ ಮತ್ತು ಇತರ ಹಲವು ಸ್ನೇಹಪರ ದೇಶಗಳೊಂದಿಗೆ ಸಮನ್ವಯದಿಂದ ತೆರವು ಕಾರ್ಯಾಚರಣೆಗಳನ್ನು ನಡೆಸಿತು. ಕಾಬೂಲ್‌ನಿಂದ ಸ್ಥಳಾಂತರಿಸಲ್ಪಟ್ಟ ೧೬೮ ಜನರ ತಂಡದಲ್ಲಿ ಅಫ್ಘಾನಿಸ್ತಾನದ ಶಾಸಕರಾದ ಅನಾರ್ಕಲಿ ಹೊನ್ಯಾರ್ ಮತ್ತು ನರೇಂದರ್ ಸಿಂಗ್ ಖಾಲ್ಸಾ ಮತ್ತು ಅವರ ಕುಟುಂಬಗಳು ಸೇರಿದ್ದವು ಎಂದು ಸ್ಥಳಾಂತರಿಸುವ ಕಾರ್ಯಾಚರಣೆಯ ಪರಿಚಯವಿರುವ ಜನರು ತಿಳಿಸಿದ್ದಾರೆ.
ಬ್ಲಾö್ಯಕ್ ಫಂಗಸ್ ಸೋಂಕಿತರಿಗೆ ಸರಕಾರದಿಂದ ಚಿಕಿತ್ಸಾ ವೆಚ್ಚ
ವಿಜಯಪುರ, ಆ. ೨೨: ಬ್ಲಾö್ಯಕ್ ಫಂಗಸ್‌ಗೆ ತುತ್ತಾದವರು ಗುಣಮುಖರಾಗುವವರೆಗೂ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಇನ್ನು ಮುಂದೆ ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಕಪ್ಪು ಶಿಲೀಂಧ್ರದ ಪ್ರಕರಣಗಳು ಕಡಿಮೆಯಾಗಿವೆ. ಸೋಂಕಿಗೊಳಗಾದ ಜನರು ಚಿಕಿತ್ಸೆ ಪಡೆದುಕೊಳ್ಳಲು ಕಷ್ಟಪಡುತ್ತಿರುವುದು ತÀನ್ನ ಗಮನಕ್ಕೆ ಬಂದಿದೆ. ಏಕೆಂದರೆ ಸೋಂಕಿಗೆ ನೀಡಲಾಗುವ ಪ್ರತೀ ಡೋಸ್ ಇಂಜೆಕ್ಷನ್‌ಗೆ ರೂ. ೧೦,೦೦೦ ದಿಂದ ೧೨,೦೦೦ ವೆಚ್ಚವಾಗುತ್ತಿದೆ. ಈ ಇಂಜೆಕ್ಷನ್‌ನ್ನು ಸೋಂಕಿಗೊಳಗಾದ ಜನರು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಪ್ರತಿನಿತ್ಯ ಪಡೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಜನರು ಹಾಗೂ ಅವರ ಕುಟುಂಬಸ್ಥರ ಮೇಲಿನ ಹೊರೆಯನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರವೇ ಈ ವೆಚ್ಚವನ್ನು ಭರಿಸಲಿದೆ ಎಂದು ಹೇಳಿದ್ದಾರೆ.
ಎನ್‌ಕೌಂಟರ್‌ಗೆ ದರೋಡೆಕೋರರು ಬಲಿ
ಗುವಾಹಟಿ, ಆ. ೨೨: ಅಪರಾಧಿಗಳ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರೆಸಿರುವ ಅಸ್ಸಾಂ ಪೊಲೀಸರು ಭಾನುವಾರ ಮುಂಜಾನೆ ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇತರ ಮೂವರು ದರೋಡೆಕೋರರು ಪರಾರಿಯಾಗಿದ್ದಾರೆ. ಡಕಾಯಿತರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಸಹ ಗುಂಡಿನ ದಾಳಿ ನಡೆಸಿದಾಗ ಗಾಯಗೊಂಡು ಮೂವರು ಹತ್ಯೆಯಾಗಿರುವುದಾಗಿ ಅಸ್ಸಾಂ ಡಿಜಿಪಿ ಭಾಸ್ಕರ್ ಜ್ಯೋತಿ ಮಹಾಂತ್ ಟ್ವೀಟ್ ಮಾಡಿದ್ದಾರೆ. ಅವರುಗಳಿಂದ ವಾಹನಗಳು, ಸಲಕರಣೆಗಳು, ಗ್ಯಾಸ್ ಕಟ್ಟರ್, ಆಕ್ಸಿಜನ್ ಸಿಲಿಂಡರ್ ಜೊತೆಗೆ ಎರಡು ಪಿಸ್ತೂಲ್‌ಗಳನ್ನು ವಶಕ್ಕೆ ಪಡೆದಿರುವುದಾಗಿ ಅವರು ತಿಳಿಸಿದ್ದಾರೆ. ಅಲಹಾಬಾದ್ ಬ್ಯಾಂಕ್ ಶಾಖೆಯನ್ನು ಡರೋಡೆ ಮಾಡಲು ಆರು ಸದಸ್ಯರನ್ನೊಳಗೊಂಡ ಗ್ಯಾಂಗ್ ಬಂದಿದೆ. ಆದರೆ, ಅದೇ ಸಮಯಕ್ಕೆ ಸ್ಥಳಕ್ಕೆ ಬಂದ ಪೊಲೀಸರನ್ನು ಕಂಡು ಎರಡು ವಾಹನಗಳನ್ನು ಅಲ್ಲಿಂದ ಪರಾರಿಯಾಗುತ್ತಿದ್ದಾಗ ಬೆನ್ನಟ್ಟಿದ್ದ ಪೊಲೀಸರು ಮೂವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆಗ ಅವರು ಗಾಯಗೊಂಡು ಬಳಿಕ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಇಡಲಾಗಿದೆ. ಪರಾರಿಯಾಗಿರುವ ಉಳಿದ ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
ಒಂದೇ ಕುಟುಂಬದ ಮೂವರು ನೀರುಪಾಲು
ಬಾಗಲಕೋಟೆ, ಆ. ೨೨: ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಬಾದಾಮಿ ತಾಲೂಕಿನ ಶಿವಯೋಗಿ ಮಂದಿರದ ಬಳಿ ನಡೆದಿದೆ. ಮೃತರನ್ನು ವಿಶ್ವನಾಥ್ ಮಾವಿನ ಮರದ (೪೦), ಪತ್ನಿ ಶ್ರಿದೇವಿ ಮಾವಿನಮರದ (೩೨) ಹಾಗೂ ಮಗಳು ನಂದಿನಿ (೧೨) ಎಂದು ಗುರುತಿಸಲಾಗಿದೆ. ಮೃತರು ಮೂಲತಃ ಗುಳೇದಗುಡ್ಡ ತಾಲೂಕಿನ ಕೊಟೇಕಲ್ ಗ್ರಾಮದವರಾಗಿದ್ದು, ಗದಗ ಜಿಲ್ಲೆಯ ರೋಣದಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಶಿವಯೋಗ ಮಂದಿರಕ್ಕೆ ತೆರಳಿದ್ದ ಇವರು ಉಪಹಾರ ಸೇವಿಸಲು ಮಲಪ್ರಭಾ ನದಿ ದಡದಲ್ಲಿ ಕುಳಿತಿದ್ದರು. ಉಪಹಾರ ಸೇವಿಸಿ ನದಿಯಲ್ಲಿ ಕೈ ತೊಳೆಯಲು ಹೋದಾಗ ಜಾರಿ ನದಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ವಿಶ್ವನಾಥ್ ಹಾಗೂ ಶ್ರಿದೇವಿ ದಂಪತಿ ನೀರಿಗೆ ಇಳಿದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಮಣಿಪುರ ರಾಜ್ಯಪಾಲರಾಗಿ ಗಣೇಶನ್
ನವದೆಹಲಿ, ಆ. ೨೨: ಮಣಿಪುರ ರಾಜ್ಯದ ನೂತನ ರಾಜ್ಯಪಾಲರಾಗಿ ತಮಿಳುನಾಡು ಬಿಜೆಪಿ ನಾಯಕ ಎಲ್. ಗಣೇಶನ್ ನೇಮಕಗೊಂಡಿದ್ದಾರೆ. ತಮಿಳುನಾಡಿನ ಹಿರಿಯ ಬಿಜೆಪಿ ನಾಯಕ ಎಲ್. ಗಣೇಶನ್ ಅವರನ್ನು ಭಾನುವಾರ ಮಣಿಪುರದ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಈ ತಿಂಗಳ ಆರಂಭದಲ್ಲಿ ಈ ಹಿಂದಿನ ರಾಜ್ಯಪಾಲರಾಗಿದ್ದ ನಜ್ಮಾ ಹೆಪ್ತುಲ್ಲಾ ಅವರು ನಿವೃತ್ತಿಯಾಗಿದ್ದು, ಅವರ ಬಳಿಕ ನಂತರ ರಾಜ್ಯಪಾಲರ ಹುದ್ದೆಯು ಖಾಲಿಯಾಗಿತ್ತು. ತಾ. ೧೦ ರಂದು ಹೆಪ್ತುಲ್ಲಾ ಕಚೇರಿಯನ್ನು ತೊರೆದಿದ್ದು, ಅದೇ ದಿನ ಸಿಕ್ಕಿಂ ಗವರ್ನರ್ ಗಂಗಾ ಪ್ರಸಾದ್ ಅವರಿಗೆ ಉಸ್ತುವಾರಿ ನೀಡಲಾಗಿತ್ತು. ಇದೀಗ ಗಣೇಶನ್ ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ರಾಷ್ಟçಪತಿ ಭವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಫ್ಘಾನ್‌ನಿಂದ ಮರಳಿದವರಿಗೆ ಉಚಿತ ಪೋಲಿಯೋ ಲಸಿಕೆ
ನವದೆಹಲಿ, ಆ. ೨೨: ಅಫ್ಘಾನಿಸ್ತಾನದಿಂದ ಭಾರತಕ್ಕೆ ಮರಳಿದವರಿಗೆ ಉಚಿತ ಪೋಲಿಯೋ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಮಾಹಿತಿ ನೀಡಿದ್ದಾರೆ. ಈಗಾಗಲೇ ನವದೆಹಲಿಗೆ ಬಂದಿಳಿದ ಅಫ್ಘಾನ್ ವಾಪಸಾತಿಗಳಿಗೆ ಪೋಲಿಯೋ ಲಸಿಕೆ ನೀಡಲಾಗಿದೆ. ಅದರ ಫೋಟೋವನ್ನು ಸಚಿವ ಮನ್ಸುಖ್ ಹಂಚಿಕೊAಡಿದ್ದಾರೆ. ಜಗತ್ತಿನಲ್ಲಿ ಪೋಲಿಯೋ ಹಾವಳಿ ಇರುವ ದೇಶ ಗಳೆಂದರೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ. ಪೋಲಿಯೋ ಮುಕ್ತ ರಾಷ್ಟçವಾಗಿ ರುವ ಭಾರತ ಇದೀಗ ಮುನ್ನೆಚ್ಚರಿಕಾ ದೃಷ್ಟಿಯಿಂದ ಅಫ್ಘಾನ್ ವಾಪಸಾತಿಗಳಿಗೆ ಪೋಲಿಯೋ ಲಸಿಕೆಯಾದ ಒಪಿವಿ ಮತ್ತು ಎಫ್‌ಐಪಿವಿ ಲಸಿಕೆ ನೀಡಿದ್ದಾರೆ. ಸಾರ್ವಜನಿಕ ಆರೋಗ್ಯ ಹಿತದ ದೃಷ್ಟಿಯಿಂದ ಈ ಮುನ್ನೆಚ್ಚರಿಕಾ ಕ್ರಮಕೈಗೊಂಡ ಆರೋಗ್ಯ ಸಿಬ್ಬಂದಿ ಕ್ರಮವನ್ನು ಸಚಿವರು ಶ್ಲಾಘಿಸಿದ್ದಾರೆ.
ಅಮೇರಿಕಾ ರಾಜ್ಯ ಸರ್ಕಾರಿ ಇಲಾಖೆ ಮೇಲೆ ಸೈಬರ್ ದಾಳಿ
ವಾಷಿಂಗ್ಟನ್, ಆ. ೨೨: ಅಮೇರಿಕಾ ರಾಜ್ಯ ಸರ್ಕಾರಿ ಇಲಾಖೆ ಮೇಲೆ ಸೈಬರ್ ದಾಳಿ ನಡೆದಿದ್ದು, ಇದರ ಜೊತೆಗೆ ಸಂಭಾವ್ಯ ಗಂಭೀರ ಉಲ್ಲಂಘನೆಯ ಸೂಚನೆಗಳನ್ನು ರಕ್ಷಣಾ ಸೈಬರ್ ಕಮಾಂಡ್ ಇಲಾಖೆಯಿಂದ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಮೇರಿಕಾದ ರಾಜ್ಯ ಇಲಾಖೆ ಮೇಲೆ ಸೈಬರ್ ದಾಳಿಯಾಗಿದ್ದು, ಈ ಕುರಿತಂತೆ ರಕ್ಷಣಾ ಸೈಬರ್ ಕಮಾಂಡ್ ಇಲಾಖೆ ಎಚ್ಚರಿಕೆ ನೀಡಿದ್ದು ದಾಳಿಯ ವ್ಯಾಪ್ತಿ ಮತ್ತು ದಾಳಿಯ ಹಿಂದಿನ ದುಷ್ಕರ್ಮಿಗಳು ಸ್ಪಷ್ಟವಾಗಿಲ್ಲ ಎಂದು ಹೇಳಿದೆ. ಇನ್ನು ದಾಳಿಯಿಂದಾಗಿ ಇಲಾಖೆಯ ಕಾರ್ಯಾಚರಣೆಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಿದೆ ಎಂಬುದು ತಿಳಿದುಬಂದಿಲ್ಲ. ಇಲಾಖೆಯು ತನ್ನ ಮಾಹಿತಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಎಲ್ಲ ಮಾಹಿತಿಗಳನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಭದ್ರತಾ ಕಾರಣಗಳಿಗಾಗಿ, ಈ ಸಮಯದಲ್ಲಿ ಯಾವುದೇ ಆಪಾದಿತ ಸೈಬರ್ ಭದ್ರತಾ ಘಟನೆಗಳ ಸ್ವರೂಪ ಅಥವಾ ವ್ಯಾಪ್ತಿಯನ್ನು ನಾವು ಚರ್ಚಿಸುವ ಸ್ಥಿತಿಯಲ್ಲಿಲ್ಲ ಎಂದು ಇಲಾಖೆಯ ವಕ್ತಾರರು ತಿಳಿಸಿದರು.